ಚೀನಾದಲ್ಲಿ ಗುರುತ್ವಾಕರ್ಷಣ ಶಕ್ತಿಯು ಕುಂಠಿತಗೊಂಡಿರುವಂತಹ ಒಂದು ವಿಶೇಷ ಅಧ್ಯಯನ ಕೇಂದ್ರವನ್ನು ನಿರ್ಮಿಸಲಾಗಿದೆ. ಬಹಳ ಪ್ರಭಾವಶಾಲಿಯಾದ ಅಯಸ್ಕಾಂತಗಳ ಸಹಾಯದಿಂದ ಇಂತಹ ಅದ್ಭುತ ಸೃಷ್ಟಿಸಲಾಗಿದೆ. ಇವುಗಳ ಪರಿಣಾಮವಾಗಿ ಚಂದ್ರನ ಗುರುತ್ವಾಕರ್ಷಣ ಶಕ್ತಿಯನ್ನು ಕೂಡ ನಿಯಂತ್ರಿಸಬಹುದಾಗಿದೆ. ಕೇವಲ 60 ಸೆ.ಮೀ. ಸುತ್ತಳತೆಯ ಕೊಠಡಿಯಲ್ಲಿ ಗುರುತ್ವಾಕರ್ಷಣ ಶಕ್ತಿ ರಹಿತ ಸ್ಥಳ ಸೃಷ್ಟಿಸಲಾಗಿರುವುದು ವಿಶೇಷ.
ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಆರರರಲ್ಲಿ ಒಂದು ಭಾಗದಷ್ಟು ಪ್ರಮಾಣವನ್ನು ಚಂದ್ರ ಉಪಗ್ರಹ ಹೊಂದಿದೆ. ಈ ಸಂಶೋಧನೆಯು ಚೀನಾದ ಬಾಹ್ಯಾಕಾಶ ವಿಜ್ಞಾನಿಗಳ ಭವಿಷ್ಯದ ಚಂದ್ರಯಾನಕ್ಕೆ ಉಪಯುಕ್ತವಾಗಲಿದೆ ಎಂಬ ನಿರೀಕ್ಷೆಯಿದೆ. ಚೀನಾ ನಿರ್ಮಿಸಿರುವ ಕೊಠಡಿಯು ಬಹಳ ಸಣ್ಣ ಪ್ರಮಾಣದ್ದಾಗಿರುವ ಕಾರಣ ಇದರಲ್ಲಿ ಗಗನಯಾತ್ರಿಕರಿಗೆ ತರಬೇತಿ ನೀಡಲಾಗಲ್ಲ. ಆದರೆ, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ’’ನಾಸಾ’’ದಲ್ಲಿಇಂಥದ್ದೇ ದೊಡ್ಡ ಕೊಠಡಿ ಇದ್ದು, ಗಗನಯಾತ್ರಿಕರಿಗೆ ತರಬೇತಿ ನೀಡಲಾಗುತ್ತದೆ.
ಕೊಠಡಿಯ ನೆಲದ ಮೇಲೆ ಕಲ್ಲುಗಳು, ಧೂಳನ್ನು ಚೆಲ್ಲಲಾಗಿದೆ. ಇದು ಚಂದ್ರನ ಮೇಲ್ಮೈನಂತೆಯೇ ಆಗಲಿದೆ. ಇಂಥ ಪ್ರಯೋಗ ವಿಶ್ವದಲ್ಲೇ ಮೊದಲ ಬಾರಿಗೆ ನಡೆಸಲಾಗಿದೆ. 1997ರಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಕಪ್ಪೆಯನ್ನು ಅಯಸ್ಕಾಂತದ ಸಹಾಯದಿಂದ ಪೂರ್ಣವಾಗಿ ಗುರುತ್ವಾಕರ್ಷಣೆ ತಪ್ಪಿಸಿ ತೇಲಾಡಿಸಲಾಗಿತ್ತು. ಇದನ್ನೇ ಆಧಾರವಾಗಿ ಇರಿಸಿಕೊಂಡು ಪ್ರಯೋಗ ನಡೆಸಲಾಗಿದೆ ಎಂದು ಭೂವಿಜ್ಞಾನ ತಂತ್ರಜ್ಞಾನ ವಿಜ್ಞಾನಿ ಲೀ ರುಯಿಲಿನ್ ತಿಳಿಸಿದ್ದಾರೆ.