ಭೂಮಿ ಹೊರತಾದ ಇತರ ಗ್ರಹದಲ್ಲಿ ಜೀವಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಈವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಸಂಶೋಧಕರು ತಮ್ಮ ಪ್ರಯತ್ನ ಮಾತ್ರ ಮುಂದುವರಿಸಿದ್ದಾರೆ.
ಚೈನಾದ ವಿಜ್ಞಾನಿಗಳು ಮಂಗಳ ಗ್ರಹದಲ್ಲಿ ನೀರಿನ ಸೆಲೆ ಹೊಂದಿರಬಹುದೆಂದು ಸಾಬೀತುಪಡಿಸುವ ಹಾದಿಯಲ್ಲಿದ್ದಾರೆ. ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಿಜ್ಞಾನಿಗಳ ತಂಡವು ಮಂಗಳ ಗ್ರಹದಲ್ಲಿ ನೀರಿನ ಸಂಭವನೀಯ ಕುರುಹುಗಳಿವೆ ಎಂದು ಬಹಿರಂಗಪಡಿಸಿದೆ.
ಚೈನಾದ ಮೊದಲ ಮಂಗಳಯಾನ, ಟಿಯಾನ್ವೆನ್-1 ನಿಂದ ಸಂಗ್ರಹಿಸಿದ ದತ್ತಾಂಶದ ಅಧ್ಯಯನವನ್ನು ಈ ವೀಕ್ಷಣೆ ಆಧರಿಸಿದೆ. ಗ್ರಹದ ಮೇಲೆ ಬಂದಿಳಿದ ಝುರಾಂಗ್ ಹೆಸರಿನ ರೋವರ್ ಈ ಆವಿಷ್ಕಾರಕ್ಕೆ ಸಹಾಯ ಮಾಡಿತು. ಇದು 80 ಮೀಟರ್ಗಳಷ್ಟು ಆಳದ ಭೂಗತ ವಸ್ತುಗಳನ್ನು ಸ್ಕ್ಯಾನ್ ಮಾಡುವ ರಾಡಾರ್ ಅನ್ನು ಹೊಂದಿದೆ.
ಆ ಗ್ರಹದಲ್ಲಿ ತನ್ನ ಮೊದಲ 113 ದಿನಗಳಲ್ಲಿ ಜುರಾಂಗ್ 1,171 ಮೀಟರ್ ಪ್ರಯಾಣಿಸಿದೆ. ನೀರಿನ ನೇರ ಕುರುಹುಗಳು ಕಂಡುಬಂದಿಲ್ಲವಾದರೂ, ರೋವರ್ ನೀರಿನ ಚಟುವಟಿಕೆಗಳಿಂದ ರೂಪುಗೊಂಡ ನೆಲದ ಪದರಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಯಿತು.
ಈ ಸಂಭವನೀಯ ನೀರಿನ ಚಟುವಟಿಕೆಗಳು ಸರಿಸುಮಾರು 3.2 ರಿಂದ 3.5 ಶತಕೋಟಿ ವರ್ಷಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಕಳೆದ 3 ಶತಕೋಟಿ ವರ್ಷಗಳಲ್ಲಿ ಮಂಗಳ ಗ್ರಹವು ಒಣಗಿದೆ ಮತ್ತು ನೀರನ್ನು ಕಳೆದುಕೊಳ್ಳುತ್ತಿದೆ ಎಂದು ಮೊದಲು ನಂಬಲಾಗಿತ್ತು, ವಿಜ್ಞಾನಿಗಳು ಈಗ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ.
ಭೂವಿಜ್ಞಾನ ಮತ್ತು ಭೂಭೌತಶಾಸ್ತ್ರದ ಸಂಸ್ಥೆಯ ಪ್ರೊಫೆಸರ್ ಚೆನ್ ಲಿಂಗ್ ಪ್ರತಿಕ್ರಿಯೆ ನೀಡಿ, ಮಂಗಳ ಗ್ರಹದ ಭೂಗತ ರಚನೆಯನ್ನು ನೋಡುವುದು ಇದೇ ಮೊದಲು. ನಮಗಿಂತ ಮುನ್ನ ಯಾರೂ ಇದನ್ನು ನೋಡಿಲ್ಲ ಎಂದು ನಾನು ಭಾವಿಸುತ್ತೇನೆ, ಇದು ಅತಿ ಹೆಚ್ಚು ರೆಸಲ್ಯೂಶನ್, 80- ಮೀಟರ್ ಆಳ, ರೋವರ್- ರಾಡಾರ್ ಡೇಟಾ ಎಂಬ ಸರಳ ಕಾರಣಕ್ಕಾಗಿ ಯಾರಾದರೂ ಹೊಂದಿರಲಿಲ್ಲ ಎಂದಿದ್ದಾರೆ.
ಗ್ರಹದ ಮೇಲ್ಮೈ ಅಡಿಯಲ್ಲಿ 80 ಮೀಟರ್ ಮಾರ್ಕ್ ನ ಕೆಳಗೆ ನೀರು ಇದೆಯೇ ಎಂಬುದನ್ನು ಬಹಿರಂಗಪಡಿಸಲು ಈಗ ಪ್ರಯತ್ನ ಮಾಡಲಾಗುತ್ತಿದೆ. ಇದ್ದರೆ, ಹವಾಮಾನದ ಮೇಲೆ ಅದರ ಪ್ರಭಾವ ಏನು? ಮಂಗಳ ಗ್ರಹದಲ್ಲಿ ಐಸ್, ಉಪ್ಪು ಮಿಶ್ರಣದ ಅಸ್ತಿತ್ವದ ಸಾಧ್ಯತೆಯನ್ನು ವಿಜ್ಞಾನಿಗಳು ಇನ್ನೂ ತಳ್ಳಿಹಾಕಿಲ್ಲ.