ಬೀಜಿಂಗ್: ಕೊರೋನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ವಿಶ್ವದ ಅನೇಕ ಕಡೆ ನಡೆದಿದ್ದು, ಅಂತಿಮ ಹಂತದ ಪ್ರಯೋಗಗಳು ಕೂಡ ಯಶಸ್ಸಿನ ಹಾದಿಯಲ್ಲಿವೆ.
ಹೀಗಿರುವಾಗಲೇ ಚೀನಾದ ಮುಂಚೂಣಿ ಲಸಿಕೆ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪ್ರಯೋಗದ ಸಂದರ್ಭದಲ್ಲಿ ಲಸಿಕೆ ಬಳಕೆಯಿಂದ ಗಂಭೀರ ಪ್ರತಿಕೂಲ ಪರಿಣಾಮ ಉಂಟಾಗಿದೆ ಎನ್ನಲಾಗಿದ್ದು, ಅಂತಿಮ ಹಂತದ ಪ್ರಯೋಗವನ್ನು ಸ್ಥಗಿತಗೊಳಿಸಲಾಗಿದೆ.
ಬ್ರೆಜಿಲ್ ನಲ್ಲಿ ನಡೆಯುತ್ತಿದ್ದ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಬ್ರೆಜಿಲ್ ಆರೋಗ್ಯ ಸಂಸ್ಥೆ ತಿಳಿಸಿದೆ. ಸಿನೋವಾಕ್ ಬಯೋಟೆಕ್ ಲಿಮಿಟೆಡ್ ನ ಲಸಿಕೆ ಕೊರೋನಾವಾಕ್ ಬಳಕೆಯಿಂದ ಅಕ್ಟೋಬರ್ 29 ರಂದು ನಡೆದ ಘಟನೆಯ ನಂತರ ಪ್ರಯೋಗವನ್ನು ಸ್ಥಗಿತಗೊಳಿಸಿರುವುದಾಗಿ ಬ್ರೆಜಿಲ್ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಪ್ರಯೋಗದಲ್ಲಿ ಉಂಟಾದ ಪರಿಣಾಮಗಳ ಮಾಹಿತಿಯನ್ನು ನೀಡಲಾಗಿಲ್ಲ. ಅಧ್ಯಯನದ ಸಂದರ್ಭದಲ್ಲಿ ಪಾಲನೆ ಮಾಡಬೇಕಿರುವ ನಿಯಮಗಳಿಗೆ ಅಡಚಣೆ ಉಂಟಾಗಿದೆ ಎಂದಷ್ಟೇ ಹೇಳಲಾಗಿದೆ.
ಸಿನೋವಾಕ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಸಾವೋಪೋಲೋ ಇನ್ ಸ್ಟಿಟ್ಯೂಟ್ ಬುಟಾಂಟನ್ ಪ್ರಯೋಗದದಲ್ಲಿ ಉಂಟಾದ ಪರಿಣಾಮದ ಬಗ್ಗೆ ಮಾಹಿತಿ ನೀಡಿಲ್ಲ.
ನಿರ್ದೇಶಕ ಡಿಮಾಸ್ ಕೋವಾಸ್ ಸಂದರ್ಶನವೊಂದರಲ್ಲಿ, ಲಸಿಕೆ ಪ್ರಯೋಗದ ಸಂದರ್ಭದಲ್ಲಿ ಓರ್ವ ಸ್ವಯಂಸೇವಕ ಮೃತಪಟ್ಟಿದ್ದಾನೆ. ಆದರೆ, ಲಸಿಕೆಯಿಂದಲೇ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಚೀನಾದಲ್ಲಿ ಕೊರೋನಾವಾಕ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ಲಕ್ಷಾಂತರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಸುರಕ್ಷತೆ ಕ್ರಮಗಳನ್ನು ಕೂಡ ಅನುಸರಿಸಲಾಗುತ್ತಿದೆ. ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ ಎಂದು ಹೇಳಲಾಗಿದೆ. ಚೀನಾದಲ್ಲಿ ಲಸಿಕೆ ಸುರಕ್ಷಿತವಾಗಿದೆ ಎಂದು ಹೇಳಲಾಗಿದ್ದರೂ, ಬ್ರೆಜಿಲ್ ನಲ್ಲಿ ಮಾತ್ರ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.