
ಬೀಜಿಂಗ್: ಚೀನಾದ ದಕ್ಷಿಣ ನಗರವಾದ ಝುಹೈನಲ್ಲಿ ಕ್ರೀಡಾ ಕೇಂದ್ರದ ಹೊರಗೆ ಜನರ ಗುಂಪಿನ ಮೇಲೆ ಕಾರೊಂದು ನುಗ್ಗಿದ ಪರಿಣಾಮ 35 ಜನರು ಸಾವನ್ನಪ್ಪಿದ್ದಾರೆ. 43 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ದೂರದರ್ಶನ ಸಿಸಿಟಿವಿ ಮಂಗಳವಾರ ವರದಿ ಮಾಡಿದೆ.
ಶಂಕಿತ 62 ವರ್ಷದ ವಿಚ್ಛೇದಿತ ಪುರುಷ ಜನಸಂದಣಿ ಮೇಲೆ ಕಾರ್ ಓಡಿಸಿದ್ದಾನೆ. ಘಟನಾ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ನಿಯಂತ್ರಿಸಿದಾಗ ಶಂಕಿತ ಚಾಕುವಿನಿಂದ ಸ್ವಯಂ ಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಮಂಗಳವಾರ ಝುಹೈ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ ಶಂಕಿತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇದು ದಾಳಿಯೋ ಅಥವಾ ಅಪಘಾತವೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಯಾವುದೇ ಉದ್ದೇಶವನ್ನು ಉಲ್ಲೇಖಿಸಲಾಗಿಲ್ಲ ಮತ್ತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಗಾಯಗೊಂಡಿರುವ ನಾಗರಿಕರಿಗೆ ಚಿಕಿತ್ಸೆ, ಸಹಾಯ ಮಾಡುವಂತೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೂಚನೆ ನೀಡಿದ್ದಾರೆ.