ಬೀಜಿಂಗ್: ನೈಋತ್ಯ ಚೀನಾದ ಜಿಗಾಂಗ್ ನಗರದಲ್ಲಿ ಬುಧವಾರ ಸಂಜೆ ಸಂಭವಿಸಿದ ಭಾರಿ ಬೆಂಕಿಯಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ತಿಳಿಸಿವೆ.
14 ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಬುಧವಾರ ಸಂಜೆ 6 ಗಂಟೆಯ ನಂತರ ಬಂದ ಮಾಹಿತಿಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಕರು ತಕ್ಷಣವೇ ಸ್ಪಂದಿಸಿ 75 ಜನರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.
ಸಾಮಾಜಿಕ ಮಾಧ್ಯಮದ ವೀಡಿಯೊ ಪೋಸ್ಟ್ ಗಳು ದಟ್ಟವಾದ ಕಪ್ಪು ಹೊಗೆ ಆಕಾಶದವರೆಗೆ ಹಬ್ಬಿರುವುದನ್ನು ಕಾಣಬಹುದಾಗಿದೆ. ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಡ್ರೋನ್‌ಗಳನ್ನು ಸಹ ಬಳಸಿದ್ದಾರೆ.
ಕಟ್ಟಡ ನಿರ್ಮಾಣ ಕಾರ್ಯದ ಕಾರಣದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬೆಂಕಿಯ ನಿರ್ದಿಷ್ಟ ಕಾರಣವನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ. ಅಗ್ನಿಶಾಮಕ ದಳದವರು ರಾತ್ರಿ 8:20ಕ್ಕೆ (ಸ್ಥಳೀಯ ಕಾಲಮಾನ) ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.