15 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದ ನಂತರ ತನ್ನ ಮಲತಂದೆಯನ್ನು ಕೊಲ್ಲಲು ಪ್ರಯತ್ನಿಸಿದ ಕ್ಷಣಗಳ ದೃಶ್ಯಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡು ಬೆಚ್ಚಿಬೀಳಿಸಿವೆ. ಮನೆಯಲ್ಲಿ ತಾಯಿ ಮೇಲೆ ಗುಂಡು ಹಾರಿಸಿದ ನಂತರ 14 ವರ್ಷ ವಯಸ್ಸಿನ ಹುಡುಗಿ ಸ್ಟೂಲ್ ಮೇಲೆ ಶಾಂತವಾಗಿ ಕುಳಿತು ತನ್ನ ಮೊಬೈಲ್ ಫೋನ್ ನಲ್ಲಿ ಮಗ್ನಳಾಗಿದ್ದಳು.
ಮಿಸ್ಸಿಸ್ಸಿಪ್ಪಿಯಲ್ಲಿ ನಡೆದ ಆಘಾತಕಾರಿ ಘಟನೆಯ ವಿಚಾರಣೆಯ ಸಂದರ್ಭದಲ್ಲಿ ಕೊಲೆಯ ದೃಶ್ಯಾವಳಿಗಳನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸಲಾಯಿತು. ಹುಡುಗಿ ಮಾರ್ಚ್ 19 ರಂದು ತಮ್ಮ ಮನೆಯೊಳಗೆ ತನ್ನ ತಾಯಿಯ ಮೇಲೆ ಗುಂಡು ಹಾರಿಸಿದ್ದಳು. 40 ವರ್ಷದ ಗಣಿತ ಶಿಕ್ಷಕ ಆಶ್ಲೇ ಸ್ಮೈಲಿ ಮುಖಕ್ಕೆ ಮಾರಣಾಂತಿಕವಾಗಿ ಗುಂಡು ತಾಗಿ ಪ್ರಾಣ ಬಿಟ್ಟಿದ್ದರು.
ಸಿಸಿ ಕ್ಯಾಮೆರಾದಲ್ಲಿ ಹುಡುಗಿ ರೂಮ್‌ಗೆ ಪ್ರವೇಶಿಸಿ ಕೆಲವು ಕ್ಷಣಗಳ ಕಾಲ ಕೋಣೆಯ ಒಳಗೆ ಮತ್ತು ಹೊರಗೆ ಅಲೆದಾಡುವುದನ್ನು ವೀಡಿಯೊ ತೋರಿಸಿದೆ. ಈ ವೇಳೆ ಮೊದಲ ಗುಂಡಿನ ದಾಳಿ ನಂತರ ಮಹಿಳೆ ಕಿರುಚುವುದು ಕೇಳಿಸಿದ್ದು ಬಳಿಕ ಇಡೀ ಕೊಠಡಿ ಮೌನವಾಯಿತು. ಕೆಲ ಕ್ಷಣಗಳ ನಂತರ ಹುಡುಗಿ ಲಿವಿಂಗ್ ರೂಮಿಗೆ ನಡೆದು ಸ್ಟೂಲ್ ಮೇಲೆ ಕುಳಿತು ತನ್ನ ನಾಯಿಗಳನ್ನು ನೋಡಿದ್ದು ಮೊಬೈಲ್ ನಲ್ಲಿ ಸಂದೇಶ ಕಳಿಸಿದ್ದಾಳೆ.
ವರದಿಯ ಪ್ರಕಾರ ಹುಡುಗಿ ತನ್ನ ಮಲತಂದೆ ಯನ್ನು ಮನೆಗೆ ಕರೆಯಲು ತನ್ನ ತಾಯಿಯ ಫೋನ್ ಅನ್ನು ಬಳಸಿ ಸಂದೇಶ ಕಳುಹಿಸಿದ್ದಾಳೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ ಹುಡುಗಿಯ ಮಲತಂದೆ ಮನೆಗೆ ಹಿಂದಿರುಗಿದಾಗ ಆಕೆ ಅವರ ಮೇಲೂ ಗುಂಡು ಹಾರಿಸಿದಳು. ಗುಂಡು ಅವರ ಭುಜಕ್ಕೆ ತಾಗಿತು, ಮತ್ತೊಂದು ಗುಂಡು ಹಾರಿಸುವ ಮುನ್ನ ಬಂದೂಕನ್ನು ಕಸಿದುಕೊಂಡರು. ತಕ್ಷಣವೇ ಹುಡುಗಿ ಅಲ್ಲಿಂದ ಪಲಾಯನ ಮಾಡಿದಳು.
ಆಕೆಯ ತಾಯಿಯನ್ನು ಕೊಂದ ನಂತರ ಹುಡುಗಿ ತನ್ನ ಸ್ನೇಹಿತರೊಬ್ಬರಿಗೆ ತುರ್ತು ಪರಿಸ್ಥಿತಿ ಇದೆ, ಬೇಗ ಮನೆಗೆ ಬರುವಂತೆ ಸಂದೇಶ ಕಳುಹಿಸಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ. ಸ್ನೇಹಿತ ಬಂದಾಗ ಆಕೆ ತನ್ನ ಸ್ನೇಹಿತನನ್ನು ಸತ್ತ ದೇಹವನ್ನು ನೋಡಿದ್ದೀರಾ ಎಂದು ಕೇಳಿ ಅವನನ್ನು ತನ್ನ ತಾಯಿಯ ಶವದ ಬಳಿ ಕರೆದೊಯ್ದಳು.
ಡೈಲಿ ಮೇಲ್ ವರದಿಯ ಪ್ರಕಾರ ಘಟನೆಯ ಹಿಂದಿನ ದಿನದವರೆಗೂ ಹುಡುಗಿ ಗಾಂಜಾ ಸೇವಿಸಿದ್ದಳು ಎಂದಿದೆ. ಆಕೆಗೆ ಲೆಕ್ಸಾಪ್ರೊ ಮತ್ತು ಝೋಲೋಫ್ಟ್ ಎಂಬ ಮಾನಸಿಕ ಅಸ್ವಸ್ಥತೆಗೆ ನೀಡುವ ಔಷಧಿಗಳನ್ನು ರೆಫರ್ ಮಾಡಲಾಗಿತ್ತು.
ಸದ್ಯ ಹುಡುಗಿಯ ಮೇಲೆ ಕೊಲೆ, ಕೊಲೆಯ ಯತ್ನ ಮತ್ತು ಸಾಕ್ಷ್ಯವನ್ನು ಹಾಳು ಮಾಡುವ ಆರೋಪವಿದೆ. ತಪ್ಪಿತಸ್ಥರೆಂದು ಕಂಡುಬಂದರೆ ಜೀವಾವಧಿ ಶಿಕ್ಷೆ ಎದುರಿಸಬೇಕಾಗುತ್ತದೆ.