ಇತ್ತೀಚೆಗೆ ಅನುಷ್ಠಾನಕ್ಕೆ ತರಲಾದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮದ ಶಿಸ್ತಿನ ಕಾನೂನು) ನಿಯಮಗಳು, 2021ರ ಕೆಲ ಆಯ್ದ ಭಾಗಗಳ ಮೇಲೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಇದೇ ಕಾಯಿದೆ ಸಂಬಂಧ ಕಳೆದ ತಿಂಗಳು ಬಾಂಬೆ ಹೈಕೋರ್ಟ್ ಹೊರಡಿಸಿದ್ದ ಆದೇಶವೂ ಸಹ ಇದೇ ರೀತಿಯದ್ದಾಗಿದೆ.
ಕಾಯಿದೆಯ ನಿಯಮ 9ರ ಉಪ ನಿಯಮಗಳಾದ (1) ಮತ್ತು (3)ರ ಮೇಲೆ ತಡೆಯಾಜ್ಞೆ ವಿಧಿಸಲಾಗಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ಹೆಚ್ಚಿನ ಅಂಶಗಳನ್ನು ಸೇರಿಸಲಾಗಿತ್ತು.
ಆನ್ಲೈನ್‌ನ ಎಲ್ಲಾ ಪ್ರಕಾಶಕರು ’ಶಿಸ್ತಿನ ನಿಯಮಗಳನ್ನು’ ಪಾಲಿಸಲೇಬೇಕೆಂದು ಕಡ್ಡಾಯಗೊಳಿಸಿ ಈ ಉಪ ವಿಭಾಗಗಳನ್ನು ತರಲಾಗಿದ್ದು, ಆಗಸ್ಟ್ 14ರಂದು ಬಾಂಬೆ ಹೈಕೋರ್ಟ್ ಇವುಗಳ ಮೇಲೆ ತಡೆಯಾಜ್ಞೆ ವಿಧಿಸಿದೆ.
ಮೊದಲು ಖರೀದಿ ಬಳಿಕ ಪಾವತಿ: ನಿಮಗಿರಲಿ ಈ ಕಾರ್ಡ್‌ಗಳ ಕುರಿತ ಮಾಹಿತಿ
ಹೊಸ ನಿಯಮಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ. ಕೃಷ್ಣ ಹಾಗೂ ಡಿಜಿಟಲ್ ಸುದ್ದಿ ಪ್ರಕಾಶಕರ ಸಂಘಕ್ಕೆ ಸೇರಿದ ಮಾಧ್ಯಮದ 13 ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಆಲಿಕೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾದ ಸಂಜೀಭ್ ಬ್ಯಾನರ್ಜಿ ಹಾಗೂ ಪಿ.ಡಿ. ಆದಿಕೇಶವುಲು ತಡೆಯಾಜ್ಞೆ ಆದೇಶ ಹೊರಡಿಸಿದ್ದಾರೆ.
ಈ ನಿಯಮಗಳಿಂದಾಗಿ ಮುಕ್ತ ವಾಕ್ ಸ್ವಾತಂತ್ರ‍್ಯದ ಮೇಲೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಕೃಷ್ಣ ವಾದಿಸಿದ್ದರು.
ಮಾಧ್ಯಮಗಳನ್ನು ನಿಯಂತ್ರಿಸಲು ನೋಡುವ ಮೂಲಕ ಸರ್ಕಾರವು ಸ್ವತಂತ್ರವಾಗಿ ಕೆಲಸ ಮಾಡುವ ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅನುವಾಗುವ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಕಸಿಯುತ್ತಿದೆ ಎಂದು ಮೇಲು ನೋಟಕ್ಕೆ ಅನಿಸುತ್ತಿದೆ ಎಂದ ಹೈಕೋರ್ಟ್, ಪ್ರಕರಣ ಸಂಬಂಧ ಮುಂದಿನ ವಿಚಾರಣೆಯನ್ನು ಅಕ್ಟೋಬರ್ ಕೊನೆಯ ವಾರಕ್ಕೆ ಮುಂದೂಡಿದೆ.
ಸುಪ್ರೀಂ ಕೋರ್ಟ್‌ನಲ್ಲೂ ಸಹ ಇದೇ ವಿಚಾರದ ಮೇಲೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಗಳು ಮುಂದಿನ ತಿಂಗಳ ಮೊದಲ ವಾರ ಇರಲಿವೆ.