ಕಂಪ್ಯೂಟರ್ ಹಾಗೂ ಮೊಬೈಲ್ ಗೇಮ್ ಗಳಿಗೆ ವಿರಾಮ ನೀಡಿ ಕೇರಂ, ಚದುರಂಗದಾಟ, ಇಲ್ಲವೇ ಕಬಡ್ಡಿ, ಬಾಸ್ಕೆಟ್ ಬಾಲ್ ನಂತಹ ದೈಹಿಕ ಶ್ರಮ ನೀಡುವ ಆಟಗಳು ಮೆದುಳನ್ನು ಚುರುಕಾಗಿಸುತ್ತದೆ. ಅಷ್ಟೇ ಅಲ್ಲದೆ, ಹೊರಗೆ ಆಡುವ ಮಕ್ಕಳಲ್ಲಿ ಸಾಮಾಜಿಕ ಬಾಂಧವ್ಯ ಹೆಚ್ಚಾಗುತ್ತದೆ. ಇದರಿಂದ ಮಕ್ಕಳ ಮನಸ್ಸು ದೃಢಗೊಳ್ಳುತ್ತದೆ. ಏಕಾಗ್ರತೆ, ಚುರುಕುತನ ತೀಕ್ಷ್ಣಗೊಳ್ಳುತ್ತದೆ. ಸ್ವಯಂ ಕೆಲಸಗಳನ್ನು ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಒತ್ತಡ ನಿಯಂತ್ರಣದಲ್ಲಿರುತ್ತದೆ.
ಈಜಲು ಬಿಡಿ
ನೀರನ್ನು ನೋಡಿದರೆ ಮಕ್ಕಳಿಗೆ ತುಂಬಾ ಇಷ್ಟ. ಸೂಕ್ತ ಭದ್ರತೆ ನಡುವೆ ಮಕ್ಕಳಿಗೆ ಈಜುವ ಶಿಕ್ಷಣ ಕೊಡಿಸಿ. ಇದು ಉತ್ತಮ ವ್ಯಾಯಾಮವಾಗಿ ಕಾರ್ಯ ನಿರ್ವಹಿಸುತ್ತದೆ. ಹೃದಯಕ್ಕೆ ಸರಿಯಾಗಿ ರಕ್ತ ಪ್ರಸಾರವಾಗುತ್ತದೆ. ಶ್ವಾಸಕೋಶದ ಕಾರ್ಯವೈಖರಿ ಉತ್ತಮಗೊಳ್ಳುತ್ತದೆ. ದೇಹ-ಮೆದುಳಿನ ನಡುವೆ ಒಳ್ಳೆಯ ಸಮನ್ವಯ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ, ಮಕ್ಕಳು ಉತ್ಸಾಹ ಹಾಗೂ ಉಲ್ಲಾಸದಿಂದ ಇರಲು ಸಹಕಾರಿಯಾಗುತ್ತದೆ.
ಸೈಕಲ್ ತುಳಿಯಲು ಬಿಡಿ
ಪ್ರತಿ ದಿನ ಕನಿಷ್ಠ 20 ನಿಮಿಷಗಳ ಕಾಲ ಸೈಕಲ್ ತುಳಿಯಲು ಮಕ್ಕಳಿಗೆ ಸಮಯ ನೀಡಿ. ಇದರಿಂದ ಮಕ್ಕಳ ಏಕಾಗ್ರತೆ ಹೆಚ್ಚಾಗುತ್ತದೆ. ಶರೀರಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ. ಕ್ಯಾಲೋರಿಗಳು ಕರಗಿ ಶರೀರದಲ್ಲಿನ ಜೈವಿಕ ಕ್ರಿಯೆಗಳ ಕಾರ್ಯವೈಖರಿ ಉತ್ತಮಗೊಳ್ಳುತ್ತದೆ. ಸ್ಥೂಲಕಾಯ, ಆತಂಕ, ಒತ್ತಡವು ಸಹ ನಿಯಂತ್ರಣದಲ್ಲಿರುತ್ತದೆ.