ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿಶೇಷ ಚೇತನ ಮಕ್ಕಳಿಗೆ ಶೇಕಡ 10 ರಷ್ಟು ಮೀಸಲಾತಿ ನೀಡಲಾಗುವುದು.
ವಿಶೇಷ ಚೇತನ, ಹೆಚ್ಐವಿ ರೋಗಕ್ಕೆ ತುತ್ತಾದ ಪೋಷಕರು, ಏಕಪೋಷಕ ಅಥವಾ ಪೋಷಕರಿಲ್ಲದ ಮಕ್ಕಳಿಗೆ 6ನೇ ತರಗತಿ ಪ್ರವೇಶದಲ್ಲಿ ಶೇ. 10ರಷ್ಟು ಮೀಸಲಾತಿ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿ, ಏಕಲವ್ಯ ಸೇರಿದಂತೆ 826 ವಸತಿ ಶಾಲೆಗಳ 807 ಶಾಲೆಗಳಲ್ಲಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಚೇತನ ಮಕ್ಕಳಿಗೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ.
ಇದರೊಂದಿಗೆ ಸಫಾಯಿ ಕರ್ಮಚಾರಿ, ಗುರುತಿಸಿದ ಮ್ಯಾನ್ಯುಯಲ್ ಸ್ಕ್ಯಾವೆಂಜರ್, ಸ್ಮಶಾನ ಕಾರ್ಮಿಕರು, ಚಿಂದಿ ಆಯುವವರು, ಅಲೆಮಾರಿ, ಅರೆ ಅಲೆಮಾರಿ, ಗುರುತಿಸಿದ ದೇವದಾಸಿಯರ ಮಕ್ಕಳು, ಜೀತ ವಿಮುಕ್ತ ಕಾರ್ಮಿಕರ ಮಕ್ಕಳು, ಬಾಲಕಾರ್ಮಿಕರಿಗೆ ಶೇಕಡ 10ರಷ್ಟು ಮೀಸಲಾತಿ ನೀಡಲು ಸೂಚಿಸಲಾಗಿದೆ. ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಇಂತಹ ಮಕ್ಕಳನ್ನು ಹೆಚ್ಚಾಗಿ ಶಿಕ್ಷಣದತ್ತ ಕರೆತರಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.