ಕಳೆದ ವರ್ಷ ಮಾರ್ಚ್ ತಿಂಗಳ ಬಳಿಕ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ವಿದ್ಯಾರ್ಥಿಗಳಿಗೆ ತಾವು ಓದುತ್ತಿರುವ ಶಾಲೆಯಲ್ಲಿಯೇ ಉಚಿತ ಶಿಕ್ಷಣ ಮುಂದುವರಿಸಬೇಕು ಎಂದು ದೆಹಲಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ಸರ್ಕಾರಿ ಭೂಮಿಯಲ್ಲಿ ಅಥವಾ ಡಿಡಿಎ ಅಡಿಯಲ್ಲಿ ನಡೆಯುತ್ತಿರುವ ಖಾಸಗಿ ಶಾಲೆಗಳು ಈ ನಿಯಮವನ್ನು ಪಾಲಿಸತಕ್ಕದ್ದು ಎಂದು ದೆಹಲಿ ಸರ್ಕಾರ ಸೂಚನೆ ನೀಡಿದೆ.
ಕೋವಿಡ್ 19 ಅಥವಾ ಇತರೆ ಯಾವುದೇ ಕಾರಣಗಳಿಂದ 2020ರ ಮಾರ್ಚ್ ತಿಂಗಳ ಬಳಿಕ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ದತ್ತಾಂಶ ಸಂಗ್ರಹಿಸುವಂತೆ ಎಲ್ಲಾ ಜಿಲ್ಲೆಗಳಿಗೆ ಸೂಚನೆ ನೀಡಲಾಗಿದೆ. ಇಂತಹ ಅನಾಥರಿಗೆ ಅದೇ ಶಾಲೆಯಲ್ಲಿಯೇ ಶಿಕ್ಷಣವನ್ನು ಉಚಿತವಾಗಿ ನೀಡುವಂತೆ ದೆಹಲಿ ಶಿಕ್ಷಣ ಇಲಾಖೆ ಹೇಳಿದೆ.
ಅಥವಾ ಇಂತಹ ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ದುರ್ಬಲ ಎಂಬ ಗುಂಪಿನ ಅಡಿಯಲ್ಲಿ ಸೇರಿಸಬೇಕು ಹಾಗೂ ಶಿಕ್ಷಣ ಇಲಾಖೆಯು ಇವರ ವ್ಯಾಸಂಗದ ಖರ್ಚನ್ನು ನೋಡಿಕೊಳ್ಳಲಿದೆ. 8ನೇ ತರಗತಿಯ ಬಳಿಕ ಇಂತಹ ವಿದ್ಯಾರ್ಥಿಯು ಯಾವುದೇ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆಯಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.
ದೆಹಲಿಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ದೆಹಲಿಯಲ್ಲಿ ಕೊರೊನಾ ವೈರಸ್ ಬಳಿಕ ಸುಮಾರು 5500 ಮಂದಿ ಮಕ್ಕಳು ತಂದೆ ಇಲ್ಲವೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಹಾಗೂ 268 ಮಕ್ಕಳು ತಂದೆ -ತಾಯಿಯನ್ನು ಕಳೆದುಕೊಂಡಿದ್ದಾರೆ.