ಬೆಂಗಳೂರು: ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೋನಾ ಸೋಂಕು ಹೆಚ್ಚು ಬಾಧಿಸಲಿದೆ ಎಂದು ಹೇಳಲಾಗಿತ್ತಾದರೂ ಎರಡನೇ ಅಲೆಯಲ್ಲಿಯೇ ಕೊರೋನಾ ಕಂಟಕದಿಂದ ಮಕ್ಕಳು ನಲುಗಿ ಹೋಗಿದ್ದಾರೆ.
ಮೊದಲ ಅಲೆಯಲ್ಲಿ 407 ದಿನದಲ್ಲಿ 29,000 ಮಕ್ಕಳಿಗೆ ಕೊರೊನಾ ಸೋಂಕು ತಗಲಿದರೆ, ಎರಡನೇ ಅಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 40,000ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದೆ. ಕಳೆದ 30 ದಿನಗಳಲ್ಲಿ ಮಕ್ಕಳಿಗೆ ಸೋಂಕು ತಗಲುವ ಪ್ರಮಾಣ ಭಾರಿ ಏರಿಕೆ ಕಂಡಿದ್ದು, ರಾಜ್ಯದಲ್ಲಿ ಸರಾಸರಿ ಎರಡು ದಿನಕ್ಕೆ ಒಂದು ಮಗು ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗಲಲಿದೆ ಎನ್ನಲಾಗಿತ್ತಾದರೂ, ಎರಡನೆಯ ಅಲೆಯೇ ಮಕ್ಕಳಿಗೆ ಕಂಟಕವಾಗಿ ಪರಿಣಮಿಸಿದೆ. ಕೋವಿಡ್ ಸೋಂಕಿತರಲ್ಲಿ ಅನೇಕರು ಹೋಂ ಐಸೋಲೇಷನ್ ನಲ್ಲಿದ್ದು, ಅವರ ಪ್ರಾಥಮಿಕ ಸಂಪರ್ಕಕ್ಕೆ ಮಕ್ಕಳು ಬರುವುದರಿಂದ ಸೋಂಕು ತಗುಲುವ ಸಾಧ್ಯತೆ ಇದೆ. ಹೋಂ ಐಸೋಲೇಷನ್ ನಲ್ಲಿ ಇರುವವರು ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸದ ಕಾರಣ ಸೋಂಕು ತಗಲುವ ಸಾಧ್ಯತೆ ಇದೆ. ಹೊರಗಿನಿಂದ ಬಂದವರು ಮಕ್ಕಳ ಸಂಪರ್ಕಕ್ಕೆ ಬಂದಾಗ ಸೋಂಕು ತಗಲಬಹುದು. ಮಕ್ಕಳಿಗೆ ಅತಿಯಾದ ಜ್ವರ, ಹೊಟ್ಟೆನೋವು, ವಾಂತಿ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎನ್ನಲಾಗಿದೆ.