ಅಂತರ್ಜಾಲದಲ್ಲಿ 18 ವರ್ಷದೊಳಗಿನ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಮತ್ತು ಡೌನ್ಲೋಡ್ ಮಾಡುವುದು ಅಪರಾಧವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ(NCRB) ಹದ್ದಿನ ಕಣ್ಣಿಟ್ಟಿದೆ. ರಾಜ್ಯದ 200 ಮಂದಿಗೆ ಮೇಲೆ ಕೇಸ್ ಹಾಕಲು ದಾಖಲೆಗಳನ್ನು ರವಾನೆ ಮಾಡಲಾಗಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ 2019 ರ ಏಪ್ರಿಲ್ 20 ರಂದು ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಅಂಡ್ ಎಕ್ಸ್ ಪ್ಲೊಯ್ಟೆಡ್ ಚಿಲ್ದ್ರನ್(NCMEC) ಸಂಸ್ಥೆ ಸ್ಥಾಪಿಸಿದೆ. ಮಕ್ಕಳ ಶೋಷಣೆ ಮೊದಲಾದ ಪ್ರಕರಣಗಳನ್ನು ಪತ್ತೆ ಹಚ್ಚುವ ಕೇಂದ್ರೀಕೃತ ಸಂಸ್ಥೆ ಇದಾಗಿದೆ.
ಇಂಟರ್ನೆಟ್ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಡೌನ್ಲೋಡ್, ವೀಕ್ಷಣೆ, ಅಪ್ಲೋಡ್, ಸೆಂಡ್ ಮಾಡುವುದು ಮೊದಲಾದ ಕೃತ್ಯ ಎಸಗುವವರನ್ನು ಗುರುತಿಸಿ NCRBಗೆ ವರದಿ ನೀಡಲಾಗುತ್ತದೆ. NCRB ಯಿಂದ ರಾಜ್ಯ ಸಿಐಡಿಗೆ ವರದಿ ಕಳುಹಿಸಲಿದ್ದು, ಅಲ್ಲಿಂದ ಸೈಬರ್ ಠಾಣೆಗೆ ಮಾಹಿತಿ ನೀಡಲಾಗುವುದು. ಪ್ರಕರಣದ ಗಂಭೀರತೆ ಆಧರಿಸಿ ಪೋಕ್ಸೋ ಕಾಯ್ದೆ, ಐಪಿಸಿ ಕಾಯ್ದೆ, ಐಟಿ ಕಾಯ್ದೆ, ಬಾಲಕಾರ್ಮಿಕರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕೇಸು ದಾಖಲಿಸಲಾಗುವುದು. ಆರೋಪಿತರು ಜಾಮೀನಿನ ಮೇಲೆ ಹೊರಗೆ ಬರಲು ಸಾಧ್ಯವಿರುವುದಿಲ್ಲ. ಮಕ್ಕಳ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ 5 ವರ್ಷ ಜೈಲು, 10 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
ರಾಜ್ಯದ 200 ಮಂದಿ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಿಸಿದ್ದು, ಅಂತಹವರ ಮಾಹಿತಿಯನ್ನು NCRB ರಾಜ್ಯ ಸಿಐಡಿಗೆ ವರ್ಗಾಯಿಸಿದೆ. ಅಲ್ಲಿದೆ ಸೈಬರ್ ಠಾಣೆಗಳಿಗೆ ಕಳಿಸಲಾಗಿದೆ. ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.