ಬೆಂಗಳೂರು: ಕೊರೋನಾ ತಡೆಗೆ ಮಕ್ಕಳಿಗೂ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸೂಜಿ ಇಲ್ಲದೇ ಕೊರೋನಾ ಲಸಿಕೆ ನೀಡಲಾಗುವುದು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಶೀಘ್ರದಲ್ಲೇ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಝೈಡಸ್ ಕ್ಯಾಡಿಲಾ ಕಂಪನಿಯ ಜೈಕೋವ್ ಡಿ ಲಸಿಕೆ ಪ್ರಯೋಗ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಕೇಂದ್ರ ಸರ್ಕಾರ ಇದೇ ಲಸಿಕೆಯನ್ನು ಮಕ್ಕಳಿಗೆ ನೀಡಲು ಅಂತಿಮಗೊಳಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸೂಜಿಯನ್ನು ಬಳಸದೆ ಈ ಲಸಿಕೆಯನ್ನು ದೇಹಕ್ಕೆ ಸೇರ್ಪಡೆ ಮಾಡಬಹುದು. ಇದಕ್ಕಾಗಿ ಫಾರ್ಮಾಜೆಟ್ ಎನ್ನುವ ವಿಶೇಷ ಸಾಧನ ಬಳಸಲಾಗುತ್ತದೆ. ಸಿರಿಂಜ್ ಮೂಲಕ ಲಸಿಕೆ ತೆಗೆದು ಚರ್ಮದ ಮೇಲಿಟ್ಟರೆ ಚರ್ಮವು ಹೀರಿಕೊಂಡು ಅದು ದೇಹ ಸೇರುತ್ತದೆ. ಸೂಜಿಯನ್ನು ಚುಚ್ಚುವುದಿಲ್ಲ ಎಂದು ಹೇಳಲಾಗಿದೆ.