ಬೆಂಗಳೂರು: ಏಪ್ರಿಲ್ 1 ರಿಂದ 12 ರಿಂದ 14 ವರ್ಷದ ಮಕ್ಕಳಿಗೆ ಶಾಲೆಯಲ್ಲಿ ಲಸಿಕೆ ನೀಡಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಲಸಿಕೆ ನೀಡಲು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
12 ರಿಂದ 14 ವರ್ಷದ 20.25 ಲಕ್ಷ ಮಕ್ಕಳಿಗೆ ಕೋರ್ಬಿ ವ್ಯಾಕ್ಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಏಪ್ರಿಲ್ 1 ರಿಂದ ಲಸಿಕೆ ನೀಡಲಾಗುವುದು. ಮಾರ್ಚ್ 16 ರಿಂದ ಆರೋಗ್ಯ ಕೇಂದ್ರಗಳಲ್ಲಿ 5.36 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ.
ಉಳಿದ ಮಕ್ಕಳಿಗೆ ತುರ್ತಾಗಿ ಲಸಿಕೆ ನೀಡುವ ಉದ್ದೇಶದಿಂದ ಮತ್ತು ಲಸಿಕಾಕರಣ ವೇಗವನ್ನು ಹೆಚ್ಚಿಸಲು ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದು ಮಕ್ಕಳಿಗೆ ಲಸಿಕೆ ನೀಡುವಂತೆ ಸೂಚನೆ ನೀಡಲಾಗಿದೆ. 2010ರ ಮಾರ್ಚ್ 28 ಅಥವಾ ಅದಕ್ಕಿಂತ ಮೊದಲು ಜನಿಸಿದ 12 ರಿಂದ 14 ವರ್ಷದ ಎಲ್ಲ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಮೊದಲ ಡೋಸ್ ಪಡೆದುಕೊಂಡ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುವುದು.