
ಬೆಂಗಳೂರು: ಪೋಷಕರನ್ನು ಆರೈಕೆ ಮಾಡದಿದ್ದರೆ ತನ್ನ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ವಿಲ್ ಅಥವಾ ದಾನ ಪತ್ರ ರದ್ದು ಮಾಡಲು ಅವಕಾಶವಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರಾದ ಬಲ್ಕಿಷ್ ಭಾನು ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದು, 2007ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೋಷಕರು ಮತ್ತು ಹಿರಿಯ ನಾಗರೀಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯಲ್ಲಿ ಈ ಅಂಶವಿದೆ. ಆದರೆ ಈ ಕಾಯ್ದೆಯ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಈ ಕಾಯ್ದೆಯ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧ ಸೇರಿದಂತೆ ಅವರ ತಿಂಗಳ ಖರ್ಚಿಗೆ ಹಣ ಕೊಡಬೇಕು. ಒಂದು ವೇಳೆ ಹಣ ಕೊಡದಿದ್ದರೆ ಅಥವಾ ಆರೈಕೆ ಮಾಡುವಲ್ಲಿ ನಿರ್ಲಕ್ಷ ತೋರಿದರೆ ಹಿರಿಯ ನಾಗರೀಕರು ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಬಹುದಾಗಿದೆ ಎಂದು ಹೇಳಿದ್ದಾರೆ.
ತಂದೆ ತಾಯಿಯಿಂದ ಅಸ್ತಿ ಪಡೆದು ಅವರ ಆರೈಕೆ ಮಾಡದಿದ್ದರೆ ಸೆಕ್ಷನ್ 23ರ ರೀತಿ ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನ ಪತ್ರವನ್ನು ರದ್ದುಗೊಳಿಸಿ ಮತ್ತೆ ಪೋಷಕರ ಹೆಸರಿಗೆ ಮರು ಸ್ಥಾಪಿಸಲು ಈ ಕಾಯ್ದೆಯಲ್ಲಿ ಅವಕಾಶವಿದ್ದು, ಉಪ ವಿಭಾಗ ಅಧಿಕಾರಿಗಳಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದ್ದಾರೆ.