ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ವಿಶೇಷ ಭೋಜನ, ಶಾಲೆಗಾಗಿ ನಾವು ನೀವು ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ವಿಶೇಷ ದಿನಗಳಂದು ದಾನಿಗಳ ನೆರವಲ್ಲಿ ಹಬ್ಬದೂಟ ನೀಡಲು ಸೂಚನೆ ನೀಡಲಾಗಿದೆ. ದಾನಿಗಳು, ಟ್ರಸ್ಟ್, ಸಂಘ ಸಂಸ್ಥೆಗಳು, ಎಸ್.ಡಿ.ಎಂ.ಸಿ.ಗಳು ಸಾರ್ವಜನಿಕರು ಸೇರಿದಂತೆ ಸಮುದಾಯದವರು ತಮ್ಮದೇ ಆರ್ಥಿಕ ಅಥವಾ ಆಹಾರ ಸಹಕಾರ ನೆರವಿನೊಂದಿಗೆ ಮಕ್ಕಳಿಗೆ ಸಂಪೂರ್ಣ ವಿಶೇಷ ಭೋಜನ ವ್ಯವಸ್ಥೆ ಅಥವಾ ಬಿಸಿ ಊಟಕ್ಕಾಗಿ ಪೂರಕವಾಗಿ ವಿಶೇಷ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದಾಗಿದೆ.
ಪ್ರಸ್ತುತ ಬಿಸಿಯೂಟದೊಂದಿಗೆ ಪೂರಕ ಪೌಷ್ಟಿಕ ಆಹಾರವಾಗಿ ವಿತರಿಸುವ ಆಹಾರ ಪದಾರ್ಥಗಳನ್ನು ಯೋಜನೆಯಡಿ ನೀಡಬಹುದು. ಮೊಟ್ಟೆ, ಶೇಂಗಾ ಚಿಕ್ಕಿ, ಹಲ್ವಾ, ಬಿಸ್ಕೆಟ್, ಹಪ್ಪಳ, ಉಪ್ಪಿನಕಾಯಿ, ವಿವಿಧ ಬಗೆಯ ಸಿಹಿತಿನಿಸು, ಸಂಜೆ ಸ್ನಾಕ್ಸ್, ಬಾಳೆಹಣ್ಣು, ಇತರೆ ಹಣ್ಣು, ಮೊಳಕೆ ಕಾಳು, ಬೆಳಗಿನ ಉಪಹಾರ ಮುಂತಾದ ಮಕ್ಕಳು ಇಷ್ಟಪಡುವ ಪೂರಕ ಆಹಾರ ಪದಾರ್ಥಗಳನ್ನು ನೀಡಬಹುದು ಎಂದು ಹೇಳಲಾಗಿದೆ.
ಊರಿನ ಹಬ್ಬ, ಜಾತ್ರೆ, ರಥೋತ್ಸವ, ರಾಷ್ಟ್ರೀಯ ಹಬ್ಬಗಳು, ಜನ್ಮದಿನ ಜಯಂತಿ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಸ್ಥಳೀಯವಾಗಿ ಸಮುದಾಯದಿಂದ ಸಾಮೂಹಿಕವಾಗಿ ಆಚರಿಸುವ ವಿಶೇಷ ಕಾರ್ಯಕ್ರಮಗಳ ಅಂಗವಾಗಿ ವಿಶೇಷ ಭೋಜನ, ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದು ಎಂದು ಹೇಳಲಾಗಿದೆ.