ನಾಗಪುರ: ನನ್ನ ಮಕ್ಕಳು ರಾಜಕೀಯಕ್ಕೆ ಬರುವ ಆಸಕ್ತಿ ಇದ್ದಲ್ಲಿ ಮೊದಲು ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡಲಿ. ಅವರು ಪೋಸ್ಟರ್ ಅಂಟಿಸಿ, ಬ್ಯಾನರ್ ಕಟ್ಟಿ ಪಕ್ಷದಲ್ಲಿ ಹಂತ ಹಂತವಾಗಿ ಬೆಳೆದು ಬರಲಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾಗಪುರದಿಂದ ಮೂರನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಿತಿನ್ ಗಡ್ಕರಿ ನಾಗಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿ, ಈ ಬಾರಿ 5 ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಕ್ಕಳ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಅವರು, ನನ್ನ ಮಕ್ಕಳಾಗಲಿ ಅಥವಾ ಬೇರೆಯವರ ಮಕ್ಕಳಾಗಲಿ ಚುನಾವಣೆ ರಾಜಕೀಯಕ್ಕೆ ಬರುವ ಮೊದಲು ಪಕ್ಷದ ಕಾರ್ಯಕರ್ತರಾಗಿ ದುಡಿಯಬೇಕು. ನನ್ನ ಉತ್ತರಾಧಿಕಾರಿಯಾಗುವ ಮೊದಲ ಹಕ್ಕು ಪಕ್ಷದ ಕಾರ್ಯಕರ್ತರಿಗೆ ಇದೆ. ಪಕ್ಷಕ್ಕಾಗಿ, ನನಗಾಗಿ ಹಗಲು -ಇರುಳು ದುಡಿದ ಕಾರ್ಯಕರ್ತರಿಗೆ ಮೊದಲ ಹಕ್ಕು ಇದೆ ಎಂದು ಹೇಳಿದ್ದಾರೆ. ನಿತಿನ್ ಗಡ್ಕರಿ ಅವರಿಗೆ ಮೂವರು ಮಕ್ಕಳಿದ್ದಾರೆ.