ಬೆಂಗಳೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 2025ರ ಜನವರಿ 14 ರಿಂದ 24ರ ವರೆಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ನಡೆಸುವಂತೆ ಸೂಚಿಸಲಾಗಿದೆ. ಈ ದಿನಗಳಲ್ಲಿ ಯಾವುದಾದರು ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸಲು ಸರ್ಕಾರ ಸೂಚಿಸಿದೆ.
ಮಕ್ಕಳ ಆರೋಗ್ಯ ವೃದ್ಧಿ, ಶೈಕ್ಷಣಿಕ ಸುಧಾರಣೆ, ಅವರ ಮೇಲಿನ ಯಾವುದೇ ಶೋಷಣೆ ತಾರತಮ್ಯಗಳಾಗದಂತೆ ತಡೆಯುವ ನಿಟ್ಟಿನಲ್ಲಿ, ಮಕ್ಕಳ ಹಕ್ಕುಗಳ ರಕ್ಷಣೆ, ಭಾಗವಹಿಸುವಿಕೆ ಹಕ್ಕು ಒದಗಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳುವಂತೆ ತಿಳಿಸಲಾಗಿದೆ.
ಕಾರ್ಯಕ್ರಮದ ಯಶಸ್ವಿಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಮಟ್ಟದ ಮಕ್ಕಳ ಶಿಕ್ಷಣ ಕಾರ್ಯಪಡೆ, ಎಸ್.ಡಿ.ಎಂ.ಸಿ., ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸೇರಿ ವಿವಿಧ ಇಲಾಖೆಗಳ ಸಮಿತಿಗಳ ಸಭೆ ನಡೆಸಿ ಕಾರ್ಯಕ್ರಮ ರೂಪಿಸಬೇಕು.
ಈ ಅವಧಿಯಲ್ಲಿ ಮಕ್ಕಳ ಜನನ ನೋಂದಣಿ, ಜನನ ಪ್ರಮಾಣ ಪತ್ರಗಳ ವಿತರಣೆ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ, ಪೌಷ್ಟಿಕ ಆಹಾರ ಸೇವನೆ, ನಿಗದಿತ ಚುಚ್ಚುಮದ್ದುಗಳ ಪ್ರಾಮುಖ್ಯತೆ, ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದಲ್ಲಿ ಸೂಚಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚನೆ ನೀಡಿದೆ.