ಧಾರವಾಡ: ಹೆತ್ತ ಮಕ್ಕಳನ್ನೇ ಪ್ರಿಯಕರರ ಜೊತೆ ಸೇರಿ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ತಾಯಂದಿರು ಸೇರಿ ಅವರ ಇಬ್ಬರು ಪ್ರಿಯಕರರನ್ನು ಹುಬ್ಬಳ್ಳಿ -ಧಾರವಾಡ ಪೊಲೀಸರು ಬಂಧಿಸಿದ್ದು, ಆರು ಜನ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಧಾರವಾಡದ ರೇಷ್ಮಾ ಸಾಂಬ್ರಾಣಿ, ಪ್ರಿಯಾಂಕಾ ಸಾಂಬ್ರಾಣಿ, ಸುನಿಲ ಕರಿಗಾರ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮೂಲದ ಮುತ್ತುರಾಜ ಬಂಧಿತ ಆರೋಪಿಗಳಾಗಿದ್ದಾರೆ. ರೇಷ್ಮಾ ಮತ್ತು ಪ್ರಿಯಾಂಕಾ ಇಬ್ಬರು ಅಣ್ಣತಮ್ಮಂದಿರ ಪತ್ನಿಯರಾಗಿದ್ದಾರೆ. ಈ ಇಬ್ಬರಿಗೆ ತಲಾ ಮೂವರು ಮಕ್ಕಳಿದ್ದಾರೆ. ಇವರಲ್ಲಿ ಒಬ್ಬಳ ಪತಿ ಮೃತಪಟ್ಟಿದ್ದಾರೆ.
ಈ ಇಬ್ಬರಿಗೂ ಪ್ರಿಯಕರರು ಇದ್ದರು. ಆ ಪ್ರಿಯಕರರೊಂದಿಗೆ ತಮ್ಮ ಆರು ಮಕ್ಕಳನ್ನು ನವೆಂಬರ್ 7ರಂದು ಅಪಹರಣ ಮಾಡಿದ್ದಾರೆ. ಬೆಂಗಳೂರಿನ ಹೆಬ್ಬಾಳಕ್ಕೆ ತೆರಳಿದ್ದಾರೆ. ಕುಟುಂಬದವರು ಆರು ಜನ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದು, ಮಕ್ಕಳ ನಾಪತ್ತೆ ಪ್ರಕರಣ ತನಿಖೆ ಕೈಗೊಂಡ ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತಾಲಯ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿದೆ.
ಮಹಿಳೆಯರಿಬ್ಬರು ತಮ್ಮ ಗಂಡನ ಮನೆಗೆ ಕರೆ ಮಾಡಿ ನಿಮ್ಮ ಮಕ್ಕಳು ಬೇಕೆಂದರೆ ಇಂತಹ ಖಾತೆಗೆ 10 ಲಕ್ಷ ರೂ. ಹಾಕಬೇಕು. ಇಲ್ಲದಿದ್ದರೆ ಮಕ್ಕಳನ್ನು ಎಲ್ಲಾದರೂ ಬಿಟ್ಟು ಹೋಗುವುದಾಗಿ ಬೆದರಿಸಿದ್ದಾರೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಬೆಂಗಳೂರಿನಲ್ಲಿದ್ದ ಮಹಿಳೆಯರು ಮತ್ತು ಅವರ ಪ್ರಿಯಕರರನ್ನು ಬಂಧಿಸಿ ಆರು ಮಕ್ಕಳನ್ನು ರಕ್ಷಿಸಿದ್ದಾರೆ. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.