ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಜೊತೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿವೆ. ಪ್ರಜಾಪ್ರಭುತ್ವದ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಡುವ ಚುನಾವಣಾ ಸಂದರ್ಭದಲ್ಲಿ ರಾಜಕೀಯದ ಪಕ್ಷಗಳು ತಮ್ಮ ಪ್ರಣಾಳಿಕೆ ಘೋಷಣೆ ಜೊತೆಗೆ ಇತರೆ ಭರವಸೆಗಳನ್ನೂ ನೀಡುತ್ತಿದ್ದು, ಇದರ ಮಧ್ಯೆ ಕೊಡಗು ಜಿಲ್ಲಾ ವಸತಿ ಶಾಲಾ ವಿದ್ಯಾರ್ಥಿಗಳು ಮಾದರಿ ಕಾರ್ಯ ಮಾಡುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಕೊಡಗು ಜಿಲ್ಲೆಯ ಒಂಬತ್ತು ವಸತಿ ಶಾಲೆ ಮತ್ತು ನೂರಕ್ಕೂ ಅಧಿಕ ವಿದ್ಯಾರ್ಥಿ ನಿಲಯದ 12,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮತದಾನದ ಮಹತ್ವ ಕುರಿತಂತೆ ತಮ್ಮ ಪೋಷಕರಿಗೆ ಪತ್ರ ಬರೆಯುತ್ತಿದ್ದು, ‘ನಮ್ಮ ಭವಿಷ್ಯಕ್ಕಾಗಿ ದಯವಿಟ್ಟು ಈ ಬಾರಿ ಮರೆಯದೆ ಮತದಾನ ಮಾಡಿ’ ಎಂದು ಮನವಿ ಮಾಡುತ್ತಿದ್ದಾರೆ.
ಈ ಮೂಲಕ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮತದಾನದ ಮಹತ್ವ ತಿಳಿಸಿ ಕೊಡುತ್ತಿದ್ದು, ಮೊಬೈಲ್ ಯುಗದ ಇಂದಿನ ಸಂದರ್ಭದಲ್ಲಿ ಅಂಚೆ ಪತ್ರ ಮರೆಯಾಗಿರುವುದರ ಮಧ್ಯೆ ಇದರ ಸದುಪಯೋಗವೂ ಆಗುತ್ತಿದೆ. ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕೈಗೊಂಡಿರುವ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.