ನವದೆಹಲಿ: ಕೊರೋನಾ ನಿರೋಧಕವಾಗಿ ಮಕ್ಕಳಿಗೆ ನೀಡುವ ಲಸಿಕೆ ಸೆಪ್ಟಂಬರ್ ನಲ್ಲಿ ಲಭ್ಯವಾಗಲಿದೆ. ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತ್ ಬಯೋಟೆಕ್ ವತಿಯಿಂದ ಮಕ್ಕಳಿಗಾಗಿ ಅಭಿವೃದ್ಧಿಪಡಿಸಲಾದ ಲಸಿಕೆಯ ಕ್ಲಿನಿಕಲ್ ಪ್ರಯೋಗ ಕೊನೆಯ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ ವೇಳೆಗೆ ಲಸಿಕೆ ಪ್ರಯೋಗದ ದತ್ತಾಂಶಗಳು ಲಭ್ಯವಾಗಲಿದ್ದು, ಅದೇ ಹೊತ್ತಿಗೆ ಲಸಿಕೆ ಕೂಡ ಸಿಗಲಿದೆ. ಮಕ್ಕಳಿಗೆ ಲಸಿಕೆ ನೀಡುವುದರೊಂದಿಗೆ ಶಾಲೆಗಳನ್ನು ಆರಂಭಿಸಬಹುದು. ಲಸಿಕೆ ನೀಡುವುದರಿಂದ ರೋಗನಿರೋಧಕ ಶಕ್ತಿ ಬರುತ್ತದೆ. ಆದರೆ, ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಪ್ರಾಥಮಿಕ ತರಗತಿಗಳನ್ನು ಆರಂಭಿಸಬಹುದು ಎಂದೂ ಅವರು ಹೇಳಿದ್ದಾರೆ.
ಭಾರತ್ ಬಯೋಟೆಕ್ ಜೊತೆಗೆ ಝೈಡುಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಕ್ಲಿನಿಕಲ್ ಪ್ರಯೋಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.