ಬೆಂಗಳೂರು: ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ವಿಷಯ ಮುಚ್ಚಿಟ್ಟರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಿಗೆ ಕೋವಿಡ್ ಲಕ್ಷಣಗಳಿದ್ದರೆ ಶಾಲೆಗಳಿಗೆ ರಜೆ ನೀಡುವಂತೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ. ಬೆಂಗಳೂರಿನ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮುನಂತಹ ರೋಗಲಕ್ಷಣಗಳು ಹೆಚ್ಚಾಗುತ್ತಿದ್ದು, ಕೊರೋನಾ ಪರೀಕ್ಷೆಗೆ ಒಳಪಟ್ಟ ಅನೇಕ ಮಕ್ಕಳಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಶಾಲೆಗಳ ಆಡಳಿತ ಮಂಡಳಿಗಳು ವಿಷಯ ಮುಚ್ಚಿಡುತ್ತಿದ್ದಾರೆ.
ಪೋಷಕರು ಆತಂಕದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಶಾಲೆಗೆ ಅಪಖ್ಯಾತಿ ಬರುತ್ತದೆ ಎನ್ನುವ ಕಾರಣಕ್ಕೆ ಕೊರೋನಾ ತಗುಲಿದ ವಿಚಾರವನ್ನು ಮುಚ್ಚಿಡುತ್ತಿದ್ದಾರೆ. ಅನೇಕ ಶಾಲೆಗಳಲ್ಲಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದ ಕಾರಣ ಸೋಂಕು ಹೆಚ್ಚಳವಾಗುತ್ತಿದೆ ಎನ್ನಲಾಗಿದ್ದು, ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ಕೊರೊನಾ ಸೋಂಕು ಮುಂಜಾಗ್ರತೆ ಕ್ರಮಗಳನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕು. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಮಕ್ಕಳಿಗೆ ರಜೆ ನೀಡಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.