ಯುಪಿಯ ಮೈನ್ಪುರಿಯ ಗ್ರಾಮದ ಮನೆಯೊಂದರಲ್ಲಿ ಎಂದಿನಂತೆ ಚಹಾ ತಯಾರಿಸಲಾಗಿದೆ. ಅದೇ ಚಹಾ ಕುಡಿದು ಮನೆಯ ಐವರು ಸಾವೀಗಿಡಾಗಿದ್ದಾರೆ. ಕಾರಣ ಅದು ಅಂತಿಂಥ ಚಹಾ ಅಲ್ಲ, ವಿಷಪೂರಿತ ಚಹಾ ಆಗಿತ್ತು.
ಮೃತರನ್ನು ಶಿವಾನಂದನ್ (35), ಅವರ ಮಕ್ಕಳಾದ ಶಿವಂಗ್ (6) ಮತ್ತು ದಿವ್ಯಾಂಶ್ (5), ಅವರ ಮಾವ ರವೀಂದ್ರಸಿಂಗ್ (55), ಮತ್ತು ನೆರೆಹೊರೆಯವರಾದ ಸೊಬ್ರಾನ್ (42) ಎಂದು ಗುರುತಿಸಲಾಗಿದೆ.
ನಾಗ್ಲಾ ಕನ್ಹೈ ಗ್ರಾಮದ ಶಿವಾನಂದನ್ ಅವರ ಮನೆಯಲ್ಲಿ ತಯಾರಿಸಿದ ಚಹಾ ಸೇವಿಸಿದ ನಂತರ ಐವರೂ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ದೀಕ್ಷಿತ್ ತಿಳಿಸಿದ್ದಾರೆ.
ಅಧಿಕಾರಿಗಳು ಮಾಧ್ಯಮಕ್ಕೆ ಹೇಳಿರುವ ಪ್ರಕಾರ, ಶಿವಾನಂದನ್ ಅವರ ಮಾವ ರಾಮಮೂರ್ತಿ ಬೆಳಿಗ್ಗೆ ಭೇಟಿ ಮಾಡಲು ಮನೆಗೆ ಬಂದಾಗ ಶಿವಾನಂದನ್ ಅವರ ಪತ್ನಿ ಎಂದಿನಂತೆ ಎಲ್ಲರಿಗೂ ಟೀ ರೆಡಿ ಮಾಡಿ ಕೊಟ್ಟಿದ್ದಾರೆ. ಅದೇ ಸಮಯದಲ್ಲಿ ಪಕ್ಕದ ಮನೆಯ ಸೊಬ್ರಾನ್ ಅನ್ನುವವರು ಕೂಡಾ ಮನೆಗೆ ಬಂದಿದ್ದಾರೆ. ಅವರಿಗೂ ಸಹ ಟೀಯನ್ನ ಕೊಟ್ಟಿದ್ದಾರೆ. ಟೀ ಕುಡಿದ ಕೆಲವೇ ನಿಮಿಷಗಳ ನಂತರ ಒಬ್ಬೊಬ್ಬರಿಗೂ ಒಂದೊಂದು ಸಮಸ್ಯೆ ಕಾಣಿಸಿಕೊಂಡಿದೆ. ನಂತರ ಒಬ್ಬೊಬ್ಬರಾಗಿ ತಲೆ ತಿರುಗಿ ಪ್ರಜ್ಞೆಯನ್ನ ಕಳೆದುಕೊಂಡಿದ್ದಾರೆ.
ಒಬ್ಬೊಬ್ಬರದ್ದೇ ಆರೋಗ್ಯ ಹದಗೆಟ್ಟಿದ್ದ ತಕ್ಷಣ ಹತ್ತಿರದಲ್ಲೇ ಇದ್ದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆ ತಲಪುವುದರೊಳಗಾಗಿಯೇ ಶಿವಾಂಗ್ ಮತ್ತು ದಿವ್ಯಾಂಶ್ ಮೃತಪಟ್ಟಿದ್ದರು ಎಂದು ವೈದ್ಯರಾದ ರವೀಂದ್ರ ಅವರು ತಿಳಿಸಿದ್ದಾರೆ. ಇನ್ನೂ ಸೋಬ್ರಾನ್ ಮತ್ತು ಶಿವಾನಂದನ್ ಅವರ ಆರೋಗ್ಯದ ಸ್ಥಿತಿ ತುಂಬಾ ಗಂಭೀರವಾಗಿತ್ತು. ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಮೃತಪಟ್ಟಿದ್ದಾರೆ, ಎಂದು ವೈದ್ಯರು ಹೇಳಿದ್ದಾರೆ.
ಶಿವಾನಂದನ್ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಭತ್ತಕ್ಕೆ ಸಿಂಪಡಿಸಿದ ಔಷಧವನ್ನು ಚಹಾ ಎಲೆ ಎಂದು ತಪ್ಪಾಗಿ ಭಾವಿಸಿ ಟೀಗೆ ಹಾಕಿದ್ದು ಬೆಳಕಿಗೆ ಬಂದಿದೆ. ವಿವರವಾದ ತನಿಖೆ ನಡೆಯುತ್ತಿದ್ದು, ವಿಚಾರದಲ್ಲಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ.