ಬೆಂಗಳೂರು: ಇನ್ನು ಮುಂದೆ ಒಂಟಿ ಪೋಷಕರಾಗಿರುವ ಸರ್ಕಾರಿ ಪುರುಷ ನೌಕರರಿಗೂ ಆರು ತಿಂಗಳು ಶಿಶುಪಾಲನಾ ರಜೆ(Childcare Leave) ಸೌಲಭ್ಯ ಸಿಗಲಿದೆ.
ಸರ್ಕಾರದಿಂದ ಈ ಕುರಿತಾಗಿ ಆದೇಶ ಹೊರಡಿಸಲಾಗಿದೆ. ಒಂಟಿ ಪೋಷಕರಾಗಿರುವ ಅವಿವಾಹಿತ, ವಿಚ್ಛೇದಿತ ಅಥವಾ ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರು ಸೇವಾ ಅವಧಿಯಲ್ಲಿ ಗರಿಷ್ಠ ಆರು ತಿಂಗಳ ಅವಧಿಗೆ ಅಂದರೆ 180 ದಿನಗಳಿಗೆ ಮೀರದಂತೆ ಶಿಶುಪಾಲನಾ ರಜೆ ಸೌಲಭ್ಯ ಪಡೆಯಬಹುದಾಗಿದೆ.
ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಆರು ತಿಂಗಳ ಶಿಶುಪಾಲನಾ ರಜೆ ಸೌಲಭ್ಯ ಕಲ್ಪಿಸಲಾಗಿದೆ. ಅದೇ ರೀತಿ ಒಂಟಿ ಪೋಷಕರಾದ ಅವಿವಾಹಿತ, ವಿಚ್ಛೇದಿತ ಅಥವಾ ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರು ಕೂಡ ಮಕ್ಕಳ ಆರೈಕೆಗೆ ಶಿಶುಪಾಲನಾ ರಜೆ ಪಡೆಯಬಹುದಾಗಿದೆ. ಆರ್ಥಿಕ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಅಜಯ್ ಎಸ್. ಕೊರಡೆ ಆದೇಶ ಹೊರಡಿಸಿದ್ದಾರೆ. ರಜೆ ಅವಧಿಯಲ್ಲಿ ಮದುವೆ ಮಾಡಿಕೊಂಡರೆ ಸೌಲಭ್ಯ ರದ್ದುಪಡಿಸಲಾಗುವುದು ಎಂದು ಹೇಳಲಾಗಿದೆ.