
ಹೊಸಪೇಟೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಮಗು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠಾಧೀಶ ಸೇರಿ ಮೂವರ ವಿರುದ್ಧ ದೂರು ದಾಖಲಾಗಿದೆ.
ನಿಚ್ಚವ್ವನಹಳ್ಳಿ ಹಾಲಸ್ವಾಮಿ ಮಠದ ಹಾಲಸ್ವಾಮಿ, ಕಂಚಿಕೇರಿಯ ಗುರುರಾಜ್ ಮತ್ತು ಪ್ರಿಯಾಂಕಾ ಗುರುರಾಜ್ ಅವರ ವಿರುದ್ಧ ದೂರು ನೀಡಲಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ರಾಧಾಪುರಪೇಟೆಯ ವಸಂತ ಮಗು ಕಳೆದುಕೊಂಡ ಮಹಿಳೆಯಾಗಿದ್ದಾರೆ.
ಹರಪನಹಳ್ಳಿ ನರ್ಸಿಂಗ್ ಹೋಂನಲ್ಲಿ 2021ರ ಡಿಸೆಂಬರ್ 31ರಂದು ವಸಂತ ಮಗುವಿಗೆ ಜನ್ಮ ನೀಡಿದ್ದರು. ಜನವರಿ 3 ರಂದು ಮಗು ಮೃತಪಟ್ಟಿರುವುದಾಗಿ ಸುಳ್ಳು ಹೇಳಿ ಬಾಣಂತಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ನಂತರ ಮಗು ಬದುಕಿರುವ ವಿಚಾರ ತಿಳಿದ ವಸಂತ ಸ್ವಾಮಿಯನ್ನು ವಿಚಾರಿಸಿದಾಗ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ನಂತರ ವಸಂತ ಅವರು ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದು, ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.