ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ವೈದ್ಯ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಮದುವೆಗೂ ಮುನ್ನ ಗರ್ಭಧರಿಸಿ ಅಬಾರ್ಷನ್ ಮಾಡಿಸಬೇಕೆಂದುಕೊಂಡವರನ್ನೇ ಟಾರ್ಗೆಟ್ ಮಾಡುತ್ತಿದ್ದರು. 7-8 ತಿಂಗಳ ಗರ್ಭಿಣಿಯರನ್ನು ಆಪರೇಷನ್ ಮಾಡಿ ಮಗು ರಕ್ಷಿಸಿ ತಾವೇ ಸಾಕುವುದಾಗಿ ಹೇಳಿ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕೆ ಮಾರಾಟ ಮಾಡುತ್ತಿದ್ದರು.
ಆರ್.ಎಂ.ಪಿ ವೈದ್ಯ ಅಬ್ದುಲ್ ಎಂಬಾತ ಗರ್ಭಿಣಿ ಮಹಿಳೆಯರ ಆಪರೇಷನ್ ಮಾಡಿ ಮಗು ರಕ್ಷಿಸಿ, ಮಗುವನ್ನು ತಾನೇ ಸಾಕುವುದಾಗಿ ಹೇಳಿ ಬಳಿಕ ಮಗು ಆರೈಕೆ ನಂತರದಲ್ಲಿ ಮಗುವನ್ನು ಹಣಕ್ಕಾಗಿ ಮಕ್ಕಳಿಲ್ಲದವರಿಗೆ ಮಾರುತ್ತಿದ್ದ. 60,000 ರೂ ನಿಂದ 1 ಲಕ್ಷದವರೆಗೂ ಹಣ ಪಡೆದು ಮಗು ನೀಡುತ್ತಿದ್ದ. ವೈದ್ಯ ಅಬ್ದುಲ್ ಮಕ್ಕಳ ಮಾರಾಟದ ಒಂದು ಗ್ಯಾಂಗನ್ನೇ ಕಟ್ಟಿಕೊಂಡಿದ್ದ.
ವಿಷಯ ತಿಳಿದ ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಕೇಂದ್ರ ಸಂಯೋಜಕರ ಟೀಮ್, ಮಹಾದೇವಿ ಜೈನ್ ಎಂಬ ಮಕ್ಕಳ ಮಾರಾಟ ಜಾಲದ ಮಹಿಳೆಯನ್ನು ಸಂಪರ್ಕಿಸಿದ್ದರು. 1 ಲಕ್ಷದ 40 ಸಾವಿರಕ್ಕೆ ಮಗುವನ್ನು ನೀಡುವುದಾಗಿ ಹೇಳಿದ್ದಳು. ಪ್ಲಾನ್ ನಂತೆ ಬೆಳಗಾವಿ ರಾಮತೀರ್ಥನಗರಕ್ಕೆ ಮಗುವನ್ನು ಕರೆತರುವಂತೆ ಅಧಿಕಾರಿಗಳು ಸೂಚಿಸಿದ್ದರು. ಈ ವೇಳೆ ಮಹಾದೇವಿ ಹಾಗೂ ಗ್ಯಾಂಗ್ ಮಗು ಸಮೇತ ಸ್ಥಳಕ್ಕಾಗಮಿಸಿದೆ.
ಕಿಂಗ್ ಪಿನ್ ವೈದ್ಯ ಅಬ್ದುಲ್ ಗಫಾರ್ ಖಾನ್, ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನ್, ಚಂದನ ಸುಬೇದಾರ್, ಪವಿತ್ರಾ, ಪ್ರವೀಣ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.