ಬೆಳಗಾವಿ: ಸರ್ಕಾರ ಕಾನೂನು, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದರೂ, ಆಧುನಿಕವಾಗಿ ಪ್ರಪಂಚ ಎಷ್ಟೆಲ್ಲ ಅಭಿವೃದ್ಧಿ ಹೊಂದುತ್ತಿದೆ ಎಂದರೂ ಇನ್ನೂ ಜಿಲ್ಲೆ ಜಿಲ್ಲೆಗಳಲ್ಲಿ, ಹಳ್ಳಿಗಳಲ್ಲಿ ಬಾಲ್ಯವಿವಾಹ ಪದ್ಧತಿ ಮಾತ್ರ ನಿಂತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿಯೇ ಅತಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ.
ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬಂದಿದ್ದು, 18 ವರ್ಷ ವಯಸ್ಸಿನ ಬಾಲೆಯರು ಗರ್ಭ ಧರಿಸುತ್ತಿರುವ ಆತಂಕಕಾರಿ ಸಂಗತಿ ಆರೋಗ್ಯ ಇಲಾಖೆಯ ವರದಿಯಲ್ಲಿ ಬಯಲಾಗಿದೆ.
2022ರಲ್ಲಿ 81,817 ಮಹಿಳೆಯರು ಗರ್ಭಿಣಿಯಾಗಿದ್ದರೂ ಈ ಪೈಕಿ 208 ಪ್ರಕರಣಗಳು 18 ವರ್ಷದೊಳಗಿನ ಬಾಲಕಿಯರಾಗಿದ್ದಾರೆ. 2023ರ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ 51,468 ಜನ ಮಹಿಳೆಯರು ಗರ್ಭಿಣಿಯರಾಗಿದ್ದು ಅವರಲ್ಲಿ 153 ಬಾಲಕಿಯರು ಇದ್ದಾರೆ. ಇದು ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಪೋರ್ಟಲ್ ನಲ್ಲಿ ಗರ್ಭಿಣಿಯರ ನೋಂದಣಿ ಪ್ರಕ್ರಿಯೆ ವೇಳೆ ಅತಿ ಹೆಚ್ಚು ಬಾಲ್ಯವಿವಾಹದಿಂದಾಗಿಯೇ ಬಾಲಕಿಯರು ಗರ್ಭವತಿಯರಾಗಿರುವ ಅಂಶ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ-ಬೆಳಗಾವಿ ಗಡಿ ಗ್ರಾಮಗಳಲ್ಲಿ ಈ ರೀತಿ ಪ್ರಕರಣ ಹೆಚ್ಚಾಗಿವೆ. 19 ತಿಂಗಳಲ್ಲಿ ಬರೋಬ್ಬರಿ 362 ಬಾಲ್ಯ ವಿವಾಹ ನಡೆದಿದ್ದು, ಇದನ್ನು ಕಟ್ಟುನಿಟ್ಟಾಗಿ ತಡೆಯಬೇಕಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಂತಿದೆ.