ಮಂಗಳೂರು: ರಾಜ್ಯದಲ್ಲಿ 70,000ಕ್ಕೂ ಅಧಿಕ ಅಂಗನವಾಡಿಗಳಿದ್ದು, ಅವುಗಳಲ್ಲಿ 20,000 ಅಂಗನವಾಡಿಗಳಲ್ಲಿ ಮಾಂಟೆಸ್ಸರಿಗಳನ್ನು ಪ್ರಾರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಪದವೀಧರರು, 2 ಸಾವಿರಕ್ಕೂ ಅಧಿಕ ಮಂದಿ ಸ್ನಾತಕೋತ್ತರ ಪದವಿ ಇದ್ದಾರೆ. ಅವರಿಗೆ ಮತ್ತಷ್ಟು ತರಬೇತಿ ನೀಡಿ ಮಾಂಟೆಸ್ಸರಿಗಳಲ್ಲಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಾಂಟೆಸ್ಸರಿ ಆರಂಭಿಸುವ ಜೊತೆಗೆ ಅವುಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೌಕರ್ಯ ಕಲ್ಪಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ. ಅಲ್ಲದೆ, ಸಂಪೂರ್ಣ ಸಹಕಾರ ನೀಡುವ ಭರವಸೆ ಕೂಡ ನೀಡಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಾಲ್ಯ ವಿವಾಹದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವುದು ದುರದೃಷ್ಟಕರ. ಸಚಿವೆಯಾಗಿ ನನಗೂ ತಲೆತಗ್ಗಿಸುವ ವಿಚಾರ. ಬಾಲ್ಯ ವಿವಾಹಕ್ಕೆ ಇಲಾಖೆಯ ದೋಷಗಳು ಮಾತ್ರ ಕಾರಣವಲ್ಲ, ಸ್ಥಳೀಯ ಗ್ರಾಮ ಪಂಚಾಯಿತಿ, ಎಸ್‌ಡಿಎಂಸಿ ಸಮಿತಿಗಳು, ಕಾನೂನು, ಆರೋಗ್ಯ, ಪೊಲೀಸ್ ಇಲಾಖೆಗಳ ಸಹಕಾರ ಮತ್ತು ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಬಾಲ್ಯ ವಿವಾಹ ತಡೆಯಬೇಕು ಎಂದು ಹೇಳಿದ್ದಾರೆ.