ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ 2023ರ ಅಕ್ಟೋಬರ್ 10ರಂದು ನಡೆದ ಬಾಲ್ಯ ವಿವಾಹ ಪ್ರಕರಣವು ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಈ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್‌ಪಿ ರವೀಂದ್ರ ಗಡಾದಿ ಅವರು ತಮ್ಮ ಪಾತ್ರವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಈ ವಿವಾಹದಲ್ಲಿ ತಮ್ಮ ಪಾತ್ರವಿದೆ ಎಂಬ ಆರೋಪವನ್ನು ನಿರಾಕರಿಸಿರುವ ರವೀಂದ್ರ ಗಡಾದಿ, ಸಂಬಂಧಿಯೊಬ್ಬರು ಮೃತಪಟ್ಟಿದ್ದರಿಂದ ಊರಿಗೆ ಹೋದಾಗ ಈ ಮದುವೆಗೂ ಹೋಗಿದ್ದೆ, ಆದರೆ ಮದುವೆಯಲ್ಲಿ ವಧುವಿನ ವಯಸ್ಸು ಕೇಳಲು ಸಾಧ್ಯವಿಲ್ಲ. ಬಾಲಕಿಯ ತಾಯಿ ನನ್ನ ವಿರುದ್ಧ ಮಾಡುತ್ತಿರುವ ಆರೋಪ ನಿರಾಧಾರ. ಈ ಪ್ರಕರಣದಲ್ಲಿ ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಾಲಕಿಯನ್ನು ಮದುವೆಯಾಗಿ, ಅತ್ಯಾಚಾರ ಎಸಗಿ, ಗರ್ಭಿಣಿ ಮಾಡಿ, ಮಗು ಜನಿಸಲು ಕಾರಣನಾದ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಮೇಲ್ವಿಚಾರಕಿ ಶೋಭಾ ಮಗದುಮ್ಮ ಅವರು ಐಗಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
“ಈ ಬಾಲ್ಯ ವಿವಾಹವನ್ನು ರವೀಂದ್ರ ಗಡಾದಿ ಅವರೇ ಮುಂದೆ ನಿಂತು ಮಾಡಿಸಿದ್ದಾರೆ” ಎಂದು ಸಂತ್ರಸ್ತೆ ಹಾಗೂ ಆಕೆಯ ತಾಯಿ ಆರೋಪಿಸಿದ್ದರು. ಆದರೆ, ಗಡಾದಿ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಮದುವೆಯಾದ ಬಾಲಕಿಯ ಆಧಾರ್ ಗುರುತಿನ ಚೀಟಿಯಲ್ಲಿ ವಯಸ್ಸು ತಿದ್ದುಪಡಿ ಮಾಡಿದ ಆರೋಪದ ಕುರಿತಾಗಿ ತನಿಖೆಯಾಗಲಿ, ತಪ್ಪು ಮಾಡಿದವರ ವಿರುದ್ಧ ಕ್ರಮವಾಗಲಿ. ತನಿಖೆಗೆ ಎಲ್ಲ ರೀತಿಯಿಂದ ಸಹಕಾರ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.