ಥಾಣೆ: 2018 ರಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್‌ನಗರದ ಚರಂಡಿಯಲ್ಲಿ ಸಿಕ್ಕಿದ್ದ ನವಜಾತ ಶಿಶುವನ್ನು ಇಟಲಿಯ ದಂಪತಿ ದತ್ತು ಪಡೆದಿದ್ದಾರೆ.
ಚರಂಡಿಯಲ್ಲಿ ಸಿಕ್ಕ ಮಗು ಕಲುಷಿತ ನೀರು ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗಿತ್ತು. ತಲೆಗೆ ತೀವ್ರ ಗಾಯವಾಗಿತ್ತು. ಚರಂಡಿಯಲ್ಲಿದ್ದ ಮಗುವನ್ನು ವಡೋಲ್ ಗ್ರಾಮದ ನಿವಾಸಿಗಳಾದ ಶಿವಾಜಿ ರಾಗಾಡೆ ಮತ್ತು ಅವರ ಪತ್ನಿ ಜಯಶ್ರೀ ಪತ್ತೆ ಮಾಡಿದ್ದರು. ಅವರು ಪೊಲೀಸರಿಗೆ ದೂರು ದಾಖಲಿಸಿದ್ದರು. ಇಷ್ಟು ವರ್ಷಗಳಾದರೂ ಅದರ ನಿಜವಾದ ಪಾಲಕರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.
ಮಗುವನ್ನು ಮುಂಬೈನ ವಾಡಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗಾಗಿ ಹಣಕ್ಕೆ ಮನವಿ ಸಲ್ಲಿಸಿದ್ದಾಗ ಹಲವರು ಸ್ಪಂದಿಸಿದ್ದರು. 24 ಗಂಟೆಗಳಲ್ಲಿ 10.42 ಲಕ್ಷ ರೂ. ಒಟ್ಟಾಗಿತ್ತು. ಈ ಸಮಯದಲ್ಲಿ ಮಗುವನ್ನು ದತ್ತು ಪಡೆಯಲು ಇಟಲಿ ದಂಪತಿ ಬಂದಿದ್ದರು. ಆದರೆ ಕಾನೂನಿನ ಸಮಸ್ಯೆ ಎದುರಾಗಿತ್ತು. ಮಗುವನ್ನು ಆಶ್ರಮದ ಆರೈಕೆಗೆ ನೀಡಲಾಗಿತ್ತು.
ಇದೀಗ ದಂಪತಿ ಮಗುವನ್ನು ಪಡೆದು ಇಟಲಿಗೆ ಹಾರಿದ್ದಾರೆ. ಮಗುವಿಗೆ ಇಷ್ಟು ಒಳ್ಳೆಯ ಜೀವನ ಸಿಕ್ಕಿರುವುದಕ್ಕೆ ಸಂತೋಷವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.