ಕೂಡ್ಲಿಗಿ: ಮನೆ ಮುಂದೆ ಆಟವಾಡುವಾಗ ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ಸೋಮವಾರ ಸಂಜೆ ನಡೆದಿದೆ.
ವಿಸ್ಮಿತಾ ಮೃತಪಟ್ಟ ಬಾಲಕಿ. ನಾಗರಾಜ ನಾಯ್ಕ, ಕಾವೇರಿ ದಂಪತಿಯ ಪುತ್ರಿಯಾಗಿರುವ ವಿಸ್ಮಿತಾ ಮನೆ ಮುಂದೆ ಆಟವಾಡುವಾಗ ದುರಂತ ಸಂಭವಿಸಿದೆ. ತಂದೆ, ತಾಯಿ ಕೆಲಸಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದ್ದು, ಪಕ್ಕದ ಮನೆಯವರು ನೋಡುವ ವೇಳೆಗೆ ವಿಸ್ಮಿತಾ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಾಳೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.