ತುಮಕೂರು: ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ಮಗುವಿನ ಮೃತದೇಹ ಕಂಡು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮರುಗಿದ್ದಾರೆ.
ಸಂಪ್ ಗೆ ಬಿದ್ದಿದ್ದ ಮಗು ಸಕಾಲಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟಿತ್ತು. ಪಂಚರತ್ನ ರಥಯಾತ್ರೆ ಸಾಗುತ್ತಿದ್ದ ವೇಳೆ ಪೋಷಕರು ಶವ ಕೊಂಡೊಯ್ಯುತ್ತಿದ್ದರು.
ಪೋಷಕರ ಕೈಯಲ್ಲಿ ಮಗುವಿನ ಶವ ಕಂಡು ಕುಮಾರಸ್ವಾಮಿ ಮರುಗಿದ್ದಾರೆ. ತಕ್ಷಣ ಶವವನ್ನು ವಾಹನದ ಮೇಲಕ್ಕೆ ಎತ್ತಿಕೊಂಡು ಕಣ್ಣೀರು ಹಾಕಿದ್ದಾರೆ. ಪೋಷಕರ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಮಗು ಮೃತಪಟ್ಟಿರುವುದಾಗಿ ಪೋಷಕರು ಮಾಹಿತಿ ನೀಡಿದ್ದಾರೆ. ಪೋಷಕರು ಮಾಹಿತಿ ನೀಡುತ್ತಿದ್ದಂತೆ ಸ್ಥಳದಲ್ಲೇ ಫೋನ್ ಮಾಡಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ತವ್ಯ ಲೋಪವೆಸಗಿದ್ದ ಸಿಬ್ಬಂದಿ ಅಮಾನತು ಮಾಡುವಂತೆ ಸೂಚನೆ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಡಿಹೆಚ್ಒ ಭರವಸೆ ನೀಡಿದ್ದಾರೆ. ಮಗುವಿನ ಪೋಷಕರಿಗೆ ಪರಿಹಾರ ನೀಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿಗಳಿಗೂ ಕರೆ ಮಾಡಿದ ಕುಮಾರಸ್ವಾಮಿ, ಕೊಡಿಗೇನಹಳ್ಳಿ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸುವಂತೆ ತಿಳಿಸಿದ್ದಾರೆ.
ಕೊಡಿಗೇನಹಳ್ಳಿ ಗ್ರಾಮದ ಶೌಕತ್ ಮತ್ತು ಮಲ್ಲಿಕಾ ದಂಪತಿಯ ಪುತ್ರ 4 ವರ್ಷದ ಅಬ್ಬಾಸ್ ಸಂಪ್ ಗೆ ಬಿದ್ದು ಅಸ್ವಸ್ಥಗೊಂಡಿದ್ದು, ಕೂಡಲೇ ತಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಇದ್ದರೂ ಸಿಬ್ಬಂದಿ ಇರಲಿಲ್ಲ. ಸಕಾಲದಲ್ಲಿ ಚಿಕಿತ್ಸೆ ಸಿಗದೇ ಅಬ್ಬಾಸ್ ಮೃತಪಟ್ಟಿರುವುದಾಗಿ ಪೋಷಕರು ಹೇಳಿದ್ದಾರೆ.