
ಬೆಂಗಳೂರು: ಆರ್ಥಿಕ ಸದೃಢತೆ ಅಂಶವೊಂದೇ ಮಗುವಿನ ಸುಪರ್ದಿ ವಿಷಯ ನಿರ್ಧರಿಸಲು ಆಧಾರವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಣಕಾಸಿನ ಸಾಮರ್ಥ್ಯ ಹೊಂದಿರುವುದರಿಂದ 14 ವರ್ಷದ ಅಪ್ರಾಪ್ತ ಪುತ್ರಿಯನ್ನು ಶಾಶ್ವತವಾಗಿ ತನ್ನ ಸುಪರ್ದಿಗೆ ನೀಡಲು ವಿಚ್ಛೇದಿತ ಪತ್ನಿಗೆ ಆದೇಶಿಸುವಂತೆ ಕೋರಿ ಪತಿ ಸಲ್ಲಿಸಿದ ಮೇಲ್ಮನವಿಯನ್ನು ವಜಾಗೋಳಿಸಲಾಗಿದೆ.
ಪುತ್ರಿಯನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗಿಯ ಪೀಠ ಈ ಆದೇಶ ನೀಡಿದೆ.
ಅಪ್ರಾಪ್ತ ಪುತ್ರಿಯನ್ನು ಮೇಲ್ಮನವಿದಾರರ ವಶಕ್ಕೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಪುತ್ರಿಯ ಭೇಟಿ ಹಕ್ಕು ನೀಡಲು, ಮಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆಗೆ ಹಣಕಾಸಿನ ಸೌಲಭ್ಯ ಒದಗಿಸಲು ಅವಕಾಶ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಲು ಮೇಲ್ಮನವಿದಾರ ಸ್ವತಂತ್ರರಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಮೇಲ್ಮನವಿದಾರ ಪತಿ ಮತ್ತು ಆತನ ಪತ್ನಿ 2008ರ ಏಪ್ರಿಲ್ 27ರಂದು ಮದುವೆಯಾಗಿ 2009ರ ಸೆಪ್ಟೆಂಬರ್ 29ರಂದು ದಂಪತಿಗೆ ಪುತ್ರಿ ಜನಿಸಿದ್ದಳು. 2010ರ ನಂತರ ದಂಪತಿ ದೂರವಾಗಿ ಪ್ರತ್ಯೇಕ ವಾಸ ಮಾಡುತ್ತಿದ್ದಾರೆ. 2011ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, 2012ರಲ್ಲಿ ದಂಪತಿಯ ವಿವಾಹ ಅನೂರ್ಜಿತಗೊಳಿಸಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು.
ಶಾಶ್ವತವಾಗಿ ತನ್ನ ಸುಪರ್ದಿಗೆ ಪುತ್ರಿ ನೀಡಲು ಪತ್ನಿಗೆ ಆದೇಶಿಸುವಂತೆ ಕೋರಿ ಮೇಲ್ಮನವಿದಾರರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ನೆಲಮಂಗಲ ಕೌಟುಂಬಿಕ ಹಿರಿಯ ಸಿವಿಲ್ ನ್ಯಾಯಾಲಯ ವಜಾಗೊಳಿಸಿದ್ದು, ಈ ಆದೇಶ ರದ್ದುಗೊಳಿಸಿ ಪುತ್ರಿಯನ್ನು ತನ್ನ ಸುಪರ್ದಿಗೆ ನೀಡಲು ಆದೇಶಿಸಬೇಕೆಂದು ಕೋರಿ 2021 ರಲ್ಲಿ ಮೇಲ್ಮನವಿದಾರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.