ವಯಸ್ಸಾದವರಲ್ಲಿ ಮಲಬದ್ಧತೆಯ ಸಮಸ್ಯೆ ಹೆಚ್ಚು. ಅದೇ ರೀತಿ ಚಿಕ್ಕ ಮಕ್ಕಳು ಕೂಡ ಕೆಲವೊಮ್ಮೆ ಮಲಬದ್ಧತೆಯಿಂದ ಬಳಲುತ್ತಾರೆ. ಶಿಶುಗಳು 6 ತಿಂಗಳವರೆಗೆ ತಾಯಿಯ ಹಾಲನ್ನು ಮಾತ್ರ ಕುಡಿಯುತ್ತವೆ. ಈ ಸಮಯದಲ್ಲಿ ಮಲಬದ್ಧತೆ ಉಂಟಾಗುತ್ತದೆ.
ನೀರಿನ ಕೊರತೆ ಇದಕ್ಕೆ ಕಾರಣ. ತಾಯಿ ಸರಿಯಾದ ಆಹಾರ ತೆಗೆದುಕೊಳ್ಳದಿದ್ದರೆ, ಫೈಬರ್ ಭರಿತ ಆಹಾರ ಸೇವಿಸದಿದ್ದರೆ ಮಗುವಿಗೆ ಮಲಬದ್ಧತೆಯ ಸಮಸ್ಯೆ ಎದುರಾಗಬಹುದು. ಇದಕ್ಕೆ ಸುಲಭವಾದ ಮನೆಮದ್ದುಗಳಿವೆ.
ನೀರು ಕುಡಿಸಿ: ದೇಹದಲ್ಲಿ ನೀರಿನ ಕೊರತೆಯಿಂದ ಮಲಬದ್ಧತೆಯಾಗುತ್ತದೆ. ಹಾಗಾಗಿ ಮಗು 6 ತಿಂಗಳಿಗಿಂತ ಹೆಚ್ಚು ವಯಸ್ಸಿನದಾಗಿದ್ದರೆ ಮಗುವಿಗೆ ಸ್ವಲ್ಪ ಸ್ವಲ್ಪ ನೀರು ಕುಡಿಸಿ. ಮಗುವಿಗೆ ನೀವು ಸಾಲಿಡ್ ಫುಡ್ ಕೊಡ್ತಾ ಇದ್ರೆ ಅದು ಸುಲಭವಾಗಿ ಜೀರ್ಣವಾಗಲು ನೀರು ಕುಡಿಯುವುದು ಅವಶ್ಯಕ.
ಪಪ್ಪಾಯ ಹಣ್ಣು ತಿನ್ನಿಸಿ : ಪಪ್ಪಾಯ ಹಣ್ಣು ಮಲಬದ್ಧತೆಗೆ ಪರಿಹಾರ ನೀಡುತ್ತದೆ. ಪಪ್ಪಾಯಿಯಲ್ಲಿ ಅಪಾರ ಪ್ರಮಾಣದ ನಾರಿನಂಶ ಮತ್ತು ನೀರಿನಂಶವಿದ್ದು, ಇದು ಕರುಳಿನಲ್ಲಿ ಸಿಲುಕಿರುವ ಮಲವನ್ನು ಸುಲಭವಾಗಿ ತೆಗೆಯಲು ನೆರವಾಗುತ್ತದೆ. ಪಪ್ಪಾಯ ಹಣ್ಣು, ಕರುಳಿನ ಚಲನೆ ಹಾಗೂ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಚಿಕ್ಕ ಮಗುವಾಗಿದ್ದರೆ ಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ತಿನ್ನಿಸಿ. ಅಥವಾ ಹಾಲಿನ ಜೊತೆಗೆ ಬೆರೆಸಿ ಕೊಡಬಹುದು. ಮಗು 6 ತಿಂಗಳಿಗಿಂತ ಕಡಿಮೆ ವಯಸ್ಸಿನದಾಗಿದ್ದರೆ ಪಪ್ಪಾಯ ಹಣ್ಣನ್ನು ಕೊಡುವಂತಿಲ್ಲ.
ಒಣದ್ರಾಕ್ಷಿ: ಒಣದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಹೇರಳವಾಗಿದೆ. ಸಿಹಿಯಾಗಿರುವುದರಿಂದ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಮಗುವಿಗೆ ಕನಿಷ್ಠ ಒಂದು ವರ್ಷವಾಗಿದ್ದರೆ ಒಣದ್ರಾಕ್ಷಿಯನ್ನು ಹಾಲಿನ ಜೊತೆಗೆ ಬೆರೆಸಿ ಕೊಡಬಹುದು. ಒಂದು ವರ್ಷಕ್ಕಿಂತ ಚಿಕ್ಕ ಮಗುವಿಗೆ ಬೇಡ.
ತೆಂಗಿನ ಎಣ್ಣೆ : ತೆಂಗಿನೆಣ್ಣೆಯು ನವಜಾತ ಶಿಶುವಿಗೆ ಮಲಬದ್ಧತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಮಗು 6 ತಿಂಗಳಿಗಿಂತ ದೊಡ್ಡದಾಗಿದ್ದರೆ ಮಗುವಿನ ಆಹಾರಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಬಳಸಿ. ಜೊತೆಗೆ ಮಗುವಿನ ಗುದ ದ್ವಾರಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಮಲವನ್ನು ಹೊರಹಾಕಲು ಮಗುವಿಗೆ ಸುಲಭವಾಗುತ್ತದೆ.