ಬೆಂಗಳೂರು: ಯಾವುದೇ ಉದ್ಯೋಗ ಮಾಡದೆ ಮನೆಯಲ್ಲಿ ಕೇವಲ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕಾರಣ ಪತ್ನಿಗೆ ಜೀವನಾಂಶ ನೀಡಲಾಗದು ಎನ್ನುವ ಪತಿಯ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ಮಕ್ಕಳನ್ನು ನೋಡಿಕೊಳ್ಳುವುದು ಕೂಡ ಪೂರ್ಣಾವಧಿ ಕೆಲಸವಾಗಿದೆ. ಹಾಗಾಗಿ ಪತ್ನಿಗೆ ಜೀವನಾಂಶ ನೀಡಲೇಬೇಕು ಎಂದು ಆದೇಶ ನೀಡಿದೆ.
ಭಿನ್ನಾಭಿಪ್ರಾಯಗಳಿಂದ ಪತಿಯಿಂದ ಬೇರೆಯಾಗಿ ವಾಸಿಸುತ್ತಿರುವ ಕಾರಣ ಕೌಟುಂಬಿಕ ನ್ಯಾಯಾಲಯ ತನಗೆ ಮಾಸಿಕ ನಿಗದಿಪಡಿಸಿದ 18 ಸಾವಿರ ರೂ. ಜೀವನಾಂಶವನ್ನು 36,000 ರೂ.ಗೆ ಹೆಚ್ಚಳ ಮಾಡಬೇಕೆಂದು ಕೋರಿ ಪತ್ನಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಅರ್ಜಿದಾರ ಮಹಿಳೆಗೆ ಮಾಸಿಕ 36,000 ರೂ. ಜೀವನಾಂಶ ಪಾವತಿಸುವಂತೆ ಪತಿಗೆ ನಿರ್ದೇಶನ ನೀಡಿದೆ. ಪತ್ನಿ ಜೀವನಾಂಶ ಕೇಳಿರುವುದನ್ನು ಪತಿ ಆಕ್ಷೇಪಿಸಿ ಪತ್ನಿ ಉದ್ಯೋಗ ಮಾಡಲು ಸಮರ್ಥರಾಗಿದ್ದಾರೆ. ಅರ್ಹತೆ ಕೂಡ ಹೊಂದಿದ್ದಾರೆ. ದುಡಿದು ಹಣ ಸಂಪಾದಿಸಿ ಜೀವನ ನಡೆಸುವುದನ್ನು ಬಿಟ್ಟು ಪತಿಯ ಜೀವನಾಂಶದಲ್ಲೇ ಜೀವನ ನಡೆಸಲು ಬಯಸಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವುದು ಸ್ವಲ್ಪ ಹೊತ್ತಿನ ಕೆಲಸ ಹೊರತು ಪೂರ್ಣಾವಧಿ ಕೆಲಸವಲ್ಲ ಎಂದು ವಾದ ಮಂಡಿಸಿದ ಅವರ ವಾದವನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಮಕ್ಕಳನ್ನು ನೋಡಿಕೊಳ್ಳಲು ಪತ್ನಿಯೂ ಹಣ ದುಡಿಯಬಹುದು. ಆದರೆ, ಅದು ಸ್ವಲ್ಪ ಹೊತ್ತಿನ ಕೆಲಸ ಎನ್ನುವ ಹೇಳಿಕೆಯನ್ನು ಕೋರ್ಟ್ ತಳ್ಳಿ ಹಾಕಿದೆ.
ಬ್ಯಾಂಕ್ ವೊಂದರಲ್ಲಿ ಉದ್ಯೋಗಿಯಾಗಿರುವ ಪತಿಗೆ ಸುಮಾರು 90 ಸಾವಿರ ರೂ. ವೇತನ ಪಡೆಯುತ್ತಿದ್ದು, ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಪ್ರಶ್ನೆಗೆ ಮಾಸಿಕ 36,000 ರೂ. ಜೀವನಾಂಶ ನೀಡಲೇಬೇಕು ಎಂದು ಹೈಕೋರ್ಟ್ ಆದೇಶಿಸಿದೆ.