ಮೈಸೂರು: ಮಕ್ಕಳ ಮಾರಾಟ ಜಾಲವನ್ನು ಭೇದಿಸಿರುವ ಮೈಸೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಎರಡು ಮಕ್ಕಳನ್ನು ರಕ್ಷಿಸಲಾಗಿದೆ. ಪೋಷಕರ ಬಡತನವೇ ಮಕ್ಕಳ ಕಳ್ಳರಿಗೆ ಬಂಡವಾಳವಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ನಂಜನಗೂಡಿನ ಶ್ರೀಮತಿ(60) ಮತ್ತು ಆಕೆಯ ಪುತ್ರಿ ಶ್ರೀಲಕ್ಷ್ಮಿ(31) ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಗರ್ಭಿಣಿಯರಾದ ನಿರ್ಗತಿಕರು, ವಿಧವೆಯರು, ಭಿಕ್ಷುಕರು ಹಾಗೂ ಮಕ್ಕಳಿಲ್ಲದ ಶ್ರೀಮಂತ ದಂಪತಿಯನ್ನು ಗುರುತಿಸಿ ಮಕ್ಕಳ ಮಾರಾಟ ಮಾಡಲು ಸೆಳೆಯುತ್ತಿದ್ದರು. ಹಣ ನೀಡಿ ಮಕ್ಕಳನ್ನು ಪಡೆದುಕೊಳ್ಳುತ್ತಿದ್ದ ನವಜಾತ ಶಿಶುಗಳನ್ನು ಲಕ್ಷಾಂತರ ರೂಪಾಯಿಗೆ ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದರು. ಮೂರು ತಿಂಗಳು ಮತ್ತು 8 ತಿಂಗಳ ಎರಡು ಶಿಶುಗಳನ್ನು ಮಾರಾಟ ಮಾಡಿದ್ದು, ಆ ಮಕ್ಕಳನ್ನು ರಕ್ಷಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್. ಚೇತನ್ ಈ ಬಗ್ಗೆ ಮಾಹಿತಿ ನೀಡಿದ್ದು, ನಂಜನಗೂಡಿನ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ಆರೋಗ್ಯ ವಿಚಾರಿಸಲು ತೆರಳಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಗು ಇಲ್ಲದಿರುವುದು ಗೊತ್ತಾಗಿದೆ. ಸಂಬಂಧಿಕರ ಮನೆಯಲ್ಲಿ ಮಗು ಬಿಟ್ಟಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ಅಲ್ಲಿಯೂ ಮಗು ಇಲ್ಲದಿರುವುದನ್ನು ಗಮನಿಸಿ ಅನುಮಾನಗೊಂಡ ಸಿಡಿಪಿಒ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದಾಗ ಗಂಡ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮತ್ತು ಬಡತನದ ಕಾರಣದಿಂದ ಶ್ರೀಮತಿಗೆ ಮಗುವನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾಳೆ.
ಶ್ರೀಮತಿ ಮತ್ತು ಆಕೆಯ ಮಗಳು ಶ್ರೀಲಕ್ಷ್ಮಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಹೊಳೆನರಸೀಪುರದ ದಂಪತಿಗೆ ಮಗು ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನಂಜನಗೂಡಿನ ಮಹಿಳೆಗೆ ಜನಿಸಿದ ಮಗುವನ್ನು ಕೊಳ್ಳೇಗಾಲದ ದಂಪತಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಮಕ್ಕಳನ್ನು ವಶಕ್ಕೆ ಪಡೆದು ಆರೈಕೆ ಕೇಂದ್ರದಲ್ಲಿ ಇರಿಸಲಾಗಿದೆ. ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ.