ನವದೆಹಲಿ: ಮಕ್ಕಳ ಆರೈಕೆ ಮತ್ತು ದತ್ತು ಬಗ್ಗೆ ವಿವಾಹಿತ ದಂಪತಿಗೆ ಸೀಮಿತವಾಗಿದ್ದ ಕೆಲ ನಿಯಮಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸಡಿಲಗೊಳಿಸಿದೆ.
ಅವಿವಾಹಿತರು, ವಿಧವೆಯರು, ವಿಚ್ಛೇದಿತರು ಅಥವಾ ಕಾನೂನು ಬದ್ಧವಾಗಿ ಬೇರ್ಪಟ್ಟವರು ಸೇರಿದಂತೆ 25 ರಿಂದ 60 ವರ್ಷ ವಯಸ್ಸಿನ ಏಕ ಪೋಷಕ ಮಹಿಳೆ ಅಥವಾ ಪುರುಷ ಕೂಡ ಮಗುವನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ವಿಚಾರದಲ್ಲಿ ಕೆಲವು ನಿಬಂಧನೆಗಳನ್ನು ಕೂಡ ಸಚಿವಾಲಯ ವಿಧಿಸಿದೆ.
ಬಿಡುಗಡೆ ಮಾಡಲಾದ ಪರಿಷ್ಕೃತ ಮಕ್ಕಳ ಆರೈಕೆ ಮಾದರಿ ಮಾರ್ಗಸೂಚಿಯ ಅನ್ವಯ, ಏಕ ಪೋಷಕ ಮಹಿಳೆಯು ಗಂಡು ಇಲ್ಲವೇ ಹೆಣ್ಣು ಮಗುವನ್ನು ಪೋಷಿಸುವ ಹಾಗೂ ದತ್ತು ಪಡೆಯಬಹುದಾಗಿದೆ. ಆದರೆ, ಏಕಪೋಷಕ ಪುರುಷ ಹೆಣ್ಣು ಮಗುವನ್ನು ಪೋಷಿಸುವ ಹಾಗೂ ದತ್ತು ಪಡೆಯುವಂತಿಲ್ಲ ಎಂದು ಹೇಳಲಾಗಿದೆ.
ಈ ಹಿಂದೆ 2016ರ ಪರಿಷ್ಕೃತ ಮಕ್ಕಳ ಆರೈಕೆ ಮಾದರಿ ಮಾರ್ಗಸೂಚಿಯ ಪ್ರಕಾರ, ದಂಪತಿ ಎಂದರೆ ಅಧಿಕೃತ ದಾಖಲೆಗಳಲ್ಲಿ ಸಂಗಾತಿಗಳು ಎಂದು ಉಲ್ಲೇಖಿಸಲ್ಪಟ್ಟವರಿಗೆ ಮಾತ್ರ ಮಗುವನ್ನು ಪೋಷಿಸಲು ಅನುಮತಿಸಲಾಗಿತ್ತು.