ಚಿಕ್ಕಮಗಳೂರು: ಇಂದು ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಆಪರೇಷನ್ ಭೀತಿಯಿಂದಾಗಿ ರೆಸಾರ್ಟ್ ರಾಜಕೀಯ ಶುರುವಾಗಿದೆ.
ಮೈತ್ರಿ ಪಕ್ಷದ ಸದಸ್ಯರು ಕುಂದಾಪುರ ರೆಸಾರ್ಟ್ ಸೇರಿದ್ದಾರೆ. ಸಿ.ಟಿ. ರವಿಗೆ ಚಿಕ್ಕಮಗಳೂರು ನಗರಸಭೆ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. 35 ಸಂಖ್ಯಾಬಲ ಇರುವ ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 2, ಎಸ್‌ಡಿಪಿಐ 1, ಇಬ್ಬರು ಪಕ್ಷೇತರರ ಸದಸ್ಯ ಬಲವಿದೆ. ಮೂವರು ಸದಸ್ಯರು ಬಿಜೆಪಿಯಿಂದ ದೂರ ಉಳಿದ್ದಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.
ಕಳೆದ 15 ವರ್ಷಗಳಿಂದ ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಈ ಚುನಾವಣೆ ಸಿ.ಟಿ. ರವಿ ಮತ್ತು ಶಾಸಕ ತಮ್ಮಯ್ಯ ಅವರಿಗೆ ಪ್ರತಿಷ್ಠೆಯ ಚುನಾವಣೆಯಾಗಿದೆ.
ಬೆಳಗ್ಗೆ 9 ಗಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಚಿಕ್ಕಮಗಳೂರು ನಗರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು. ಕಾಂಗ್ರೆಸ್ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದೆ.
ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ. ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿ ಸಾಮಾನ್ಯ ಮಹಿಳೆಗೆ ಬಂದಿದೆ. ಬಿಜೆಪಿಯಲ್ಲಿ ಒಂಬತ್ತು ಮಹಿಳಾ ಸದಸ್ಯರಿದ್ದಾರೆ. ಮೊದಲ ಅವಧಿಯಲ್ಲಿ ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಬಿಜೆಪಿ ಬೆಂಬಲಿಸಿದ್ದರು. ಈಗ ಜೆಡಿಎಸ್ -ಬಿಜೆಪಿ ಮೈತ್ರಿ ಆಗಿದ್ದು, ನಗರಸಭೆ ಚುನಾವಣೆಯಲ್ಲಿಯೂ ಮುಂದುವರೆಯಲಿದೆ.
ಬಿಜೆಪಿ, ಜೆಡಿಎಸ್ ಒಟ್ಟು ಸದಸ್ಯ ಬಲ 20ಕ್ಕೆ ಏರಿಕೆಯಾಗಿದೆ. ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ ಸೇರಿದಂತೆ ಮೈತ್ರಿಯ ಸಂಖ್ಯಾ ಬಲ 22 ಆಗಲಿದೆ. ಜೊತೆಗೆ ಸಂಸದರು ಮತದಾನ ಮಾಡಲು ಅವಕಾಶ ಇರುವುದರಿಂದ 23ಕ್ಕೆ ಏರಿಕೆಯಾಗಲಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ.