ಚಿಕ್ಕಮಗಳೂರು: ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಟ್ರಕ್ಕಿಂಗ್ ಬಂದಿದ್ದ ಯುವಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಶವ ರಾಣಿಝರಿ ಬಳಿ 4000 ಅಡಿ ಪ್ರಪಾತದಲ್ಲಿ ಪತ್ತೆಯಾಗಿದೆ.
ಭರತ್ ಮೃತ ಯುವಕ. ರಾಣಿಝರಿ ಪಾಯಿಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನಿಂದ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ರಾಣಿಝರಿ ಬಳಿ ಟ್ರಕಿಂಗ್ ಹೋಗಿದ್ದ ಭರತ್, ರಾಣಿಝರಿ ಗುಡ್ಡದ ತುದಿಯಲ್ಲಿ ಬೈಕ್, ಮೊಬೈಲ್, ಚಪ್ಪಲಿ, ಟೀ ಶರ್ಟ್ ಗಳನ್ನು ಬಿಟ್ಟು ನಾಪತ್ತೆಯಾಗಿದ್ದ. ಭರತ್ ಮನೆಗೆ ವಾಪಾಸ್ ಆಗದ ಹಿನ್ನೆಲೆಯಲ್ಲಿ ಪೋಷಕರು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳಿದ್ದರು.
ಯುವಕನಿಗಾಗಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದಾಗ ಆತನ ವಸ್ತುಗಳು ಗುಡ್ಡದ ಬಳಿ ಪತ್ತೆಯಾಗಿತ್ತು. ಅನುಮಾನಗೊಂಡು ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಈಗ 4000 ಅಡಿ ಪ್ರಪಾತದಲ್ಲಿ ಯುವಕನ ಶವ ಪತ್ತೆಯಾಗಿದೆ.
ಪ್ರಪಾತದಿಂದ ಶವ ತೆಗೆಯಲು ಅರಣ್ಯ ಸಿಬ್ಬಂದಿಗಳು ಹರಸಾಹಸ ನಡೆಸಿದ್ದಾರೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.