
ಚಿಕ್ಕಮಗಳೂರು: ವೀಕೆಂಡ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಟ್ರಕಿಂಗ್ ಬಂದಿದ್ದ ಯುವಕ ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ರಾಣಿಝರಿ ಪಾಯಿಂಟ್ ಬಳಿ ಯುವಕ ನಾಪತ್ತೆಯಾಗಿದ್ದಾನೆ. ಭರತ್ ನಾಪತ್ತೆಯಾಗಿರುವ ಯುವಕ. ಗುಡ್ಡದ ತುದಿಯಲ್ಲಿ ಯುವಕ ತನ್ನ ಸ್ಲಿಪ್ಪರ್ ಹಾಗೂ ಟೀ ಶರ್ಟ್, ಮೊಬೈಲ್ ಗಳನ್ನು ಬಿಟ್ಟಿದ್ದಾನೆ.
ಯುವಕ ಭರತ್ ಬೆಂಗಳೂರಿನಿಂದ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿರುವ ರಾಣಿಝರಿ ಪಾಯಿಂಟ್ ಗೆ ಟ್ರಕ್ಕಿಂಗ್ ಬಂದಿದ್ದ. ಯುವಕನಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದ್ದಾರೆ.
ಯುವಕ ಭರತ್ ಬಿಇ ಮುಗಿಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕಂಪನಿ ಮೂರು ತಿಂಗಳ ಸಂಬಳ ನೀಡಿ ಕೆಲಸದಿಂದ ತೆಗೆದುಹಾಕಿತ್ತು ಎನ್ನಲಾಗಿದೆ. ಇದೇ ಬೇಸರದಲ್ಲಿದ್ದ ಯುವಕ ಬೆಂಗಳೂರಿನಿಂದ ಹಾರ್ನೆಟ್ ಬೈಕ್ ನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದಾನೆ. ಮಗ ಮನೆಗೆ ವಾಪಾಸ್ ಆಗದ ಕಾರಣ ಮಗನನ್ನು ಹುಡುಕಿಕೊಂಡು ಪೋಷಕರು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳಿದ್ದಾರೆ. ರಾಣಿಝರಿ ಪಾಯಿಂತ್ ಬಳಿ ಯುವಕನ ಬೈಕ್ ಪತ್ತೆಯಾಗಿದ್ದು, ಗುಡ್ಡದ ತುದಿಯಲ್ಲಿ ಚಪ್ಪಲಿ, ಟೀ ಶರ್ಟ್, ಮೊಬೈಲ್ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಬಾಳೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿದ್ದಾರೆ.