ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆಯಲ್ಲಿ ಹೈಡ್ರಾಮಾ ನಡೆದಿದೆ. ಬಿಜೆಪಿ ನಾಯಕರ ಸೂಚನೆಯಂತೆ ಎರಡನೇ ಬಾರಿಗೆ ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವರಸಿದ್ಧಿ ವೇಣುಗೋಪಾಲ್, ರಾಜೀನಾಮೆ ವಾಪಸ್ ಪಡೆದು ನಾಪತ್ತೆಯಾಗಿದ್ದಾರೆ.
ನಗರಸಭೆ ಅಧ್ಯಕ್ಷನ ವರ್ತನೆಗೆ ಬಿಜೆಪಿ ಗರಂ ಆಗಿದ್ದು, ವೇಣುಗೋಪಾಲ್ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಆಪರೇಷನ್ ಹಸ್ತದ ಮೂಲಕ ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದೆ.
ವರಸಿದ್ಧಿ ವೇಣುಗೋಪಾಲ್ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಅವರ ಆಪ್ತ. ಅವರ ನೇತೃತ್ವದಲ್ಲಿಯೇ ನಡೆದ ಸಭೆಯಲ್ಲಿ ವೇಣುಗೋಪಾಲ್ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ವೇಣುಗೋಪಾಲ್ ಅವರು ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಮತ್ತೆ ಯೂ ಟರ್ನ್ ಹೊಡೆದ ವೇಣುಗೋಪಾಲ್, ತಮ್ಮ ರಾಜೀನಾಮೆಯನ್ನು ಹಿಂಪಡೆದು, ಕಣ್ಮರೆಯಾಗಿದ್ದಾರೆ.
ವರಸಿದ್ಧಿ ವೇಣುಗೋಪಾಲ್ ಮೂರು ತಿಂಗಳಲ್ಲಿ ಎರಡು ಬಾರಿ ರಾಜೀನಾಮೆ ನೀಡಿ ವಾಪಾಸ್ ಪಡೆದಿದ್ದಾರೆ.