ಚಿಕ್ಕಮಗಳೂರು: ಶ್ರೀರಾಮ ಸೇನೆ ಕಾರ್ಯಕರ್ತರಿಂದ ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಚಿಕ್ಕಮಗಳೂರಿನ ಪ್ರಮುಖ ಪ್ರವಾಸಿತಾಣಗಳಿಗೆ ನಿರ್ಬಂಧ ಹಿನ್ನೆಲೆಯಲ್ಲಿ ಕೈಮರ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನಗಳನ್ನು ತಡೆದು ವಾಪಾಸ್ ಕಳುಹಿಸುತ್ತಿದ್ದಾರೆ. ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಕ್ಕಾಗಿ ಬರುತ್ತಿರುವ ಸಾವಿರಾರು ಪ್ರವಾಸಿಗರು ವಾಪಾಸ್ ಆಗುತ್ತಿದ್ದಾರೆ.
ದತ್ತಪೀಠದಲ್ಲಿ ಶ್ರೀರಾಮ ಸೇನೆ ವತಿಯಿಂದ 20ನೇ ವರ್ಷದ ದತ್ತಮಾಲಾ ಅಭಿಯಾನ ನಡೆಯುತ್ತಿದೆ. ರಾಜ್ಯದ ಸಾವಿರಾರು ದತ್ತ ಭಕ್ತರು ಮಾಲಾಧಾರಿಗಳಾಗಿ ದತ್ತಪೀಠಕ್ಕೆ ಆಗಮಿಸುತ್ತಿದ್ದಾರೆ. 7 ದಿನಗಳ ಕಾಲ ವೃತಾಚರಣೆಯಲ್ಲಿರುವ ದತ್ತಭಕ್ತರು ನಾಳೆ ನ.5ರಂದು ದತ್ತಪೀಠದಲ್ಲಿ ಹೋಮ-ಹವನ ನೆರವೇರಿಸಲಿದ್ದಾರೆ. ಈಬಾರಿ ನಾಗಾಸಾಧುಗಳು ಆಗಮಿಸಲಿದ್ದಾರೆ ಎಂಬುದು ವಿಶೇಷ.
ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠ, ಬಾಬಾಬುಡನ್ ಗಿರಿ, ಸುತ್ತಮುತ್ತ ತಾಣ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಿಗೂ ನ.6ವರೆಗೆ ನಿರ್ಬಂಧ ವಿಧಿಸಲಾಗಿದೆ.