ಚಿಕ್ಕಮಗಳೂರು: ಶಿರೂರು ಗುಡ್ಡ ಕುಸಿತ ಪ್ರಕರಣ, ಕೇರಳದ ವಯನಾಡ್ ಭೂ ಕುಸಿತ ಪ್ರಕರಣಗಳಿಂದ ಎಚ್ಚೆತ್ತ ರಾಜ್ಯ ಅರಣ್ಯ ಇಲಾಖೆ ಚಿಕ್ಕಮಗಳೂರು ಅರಣ್ಯ ವ್ಯಾಪ್ತಿಯಲ್ಲಿರುವ ಅನಧಿಕೃತ ಹೋಂ ಸ್ಟೇ, ರೆಸಾರ್ಟ್ ಗಳನ್ನು ತೆರವು ಮಾಡುವಂತೆ ಆದೇಶ ನೀಡಿದೆ.
ಚಿಕ್ಕಮಗಳೂರು ಅರಣ್ಯ ವಲಯದಲ್ಲಿರುವ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಚಂದ್ರದ್ರೋಣ ಪರ್ವತದ ಸುತ್ತಮುತ್ತಲು ನಿರ್ಮಾಣಗೊಂಡಿರುವ ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ತಮ್ಮ ಹೋಂ ಸ್ಟೇ, ರೆಸಾರ್ಟ್ ಗಳ ದಾಖಲೆಗಳನ್ನು ಸಲ್ಲಿಸುವಂತೆ ಡಿಎಫ್ ಒ ರಮೇಶ್ ಬಾಬು ನೊಟೀಸ್ ನೀಡಿದ್ದರು.
ದಾಖಲೆ ಪರಿಶೀಲನೆ ವೇಳೆ ಹಲವು ಹೋಂ ಸ್ಟೇ, ರೆಸಾರ್ಟ್ ಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹುಕ್ಕುಂದ, ಮಲ್ಲೇನಹಳ್ಳಿ, ಅರಿಶಿಣಗುಪ್ಪೆ, ಅಲ್ಲಂಪುರ ಭಾಗದಲ್ಲಿ 30 ಅನಧಿಕೃತ ರೆಸಾರ್ಟ್, ಹೋಂ ಸ್ಟೇ ಪತ್ತೆಯಾಗಿದೆ. ಈ ಎಲ್ಲಾ ಅನಧಿಕೃತ ಹೋಂ ಸ್ಟೇ, ರೆಸಾರ್ಟ್ ತೆರವುಗೊಳಿಸಲು ಅರನ್ಯ ಇಲಾಖೆ ಸಿದ್ಧತೆ ನಡೆಸಿದೆ.
ಈಗಾಗಲೇ ಅರಣ್ಯ ಸಚಿವ ಈಶ್ವರ ಖಂಡ್ರೆ, ಅನಧಿಕೃತ ರೆಸಾರ್ಟ್, ಹೋಂ ಸ್ಟೇ ಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.