ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನ. 9 ರಂದು ಬೆಳಿಗ್ಗೆ 6ರು ಗಂಟೆಯಿಂದ ನವೆಂಬರ್ 11ರಂದು ಬೆಳಿಗ್ಗೆ 6 ಗಂಟೆಯವರೆಗೆ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿ ಸೇರಿ ಪ್ರವಾಸಿ ತಾಣಗಳಿಗೆ ಇತರೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ.
ನವೆಂಬರ್ 10 ರಂದು ಚಿಕ್ಕಮಗಳೂರು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಲಿದ್ದಾರೆ. ವಾಹನಗಳ ಮೂಲಕ ತೆರಳಿ ಶ್ರೀ ಗುರು ದತ್ತಾತ್ರೇಯ ಬಾಪ ಬುಡನ್ ಸ್ವಾಮಿ ದರ್ಗಾಕ್ಕೆ ಸಾವಿರಾರು ಭಕ್ತರು ಭೇಟಿ ನೀಡಲಿದ್ದಾರೆ. ಈ ಮಾರ್ಗದ ರಸ್ತೆ ಕಿರಿದಾಗಿದ್ದು, ವಾಹನದಟ್ಟಣೆ ಮತ್ತು ಹೆಚ್ಚಿನ ಜನಸಂದಣಿ ಉಂಟಾಗುವ ಸಂಭವ ಇರುವುದರಿಂದ ಬೇರೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಗಾಳಿಕೆರೆ, ಮಾಣಿಕ್ಯಧಾರಾ ತಾಣಗಳಿಗೆ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ. ದತ್ತ ಮಾಲಾಧಾರಿಗಳು, ಶ್ರೀರಾಮ ಸೇನೆ ಮುಖಂಡರು, ಕಾರ್ಯಕರ್ತರು, ಸುತ್ತಮುತ್ತಲಿನ ಸ್ಥಳೀಯರು, ಈಗಾಗಲೇ ಹೋಂ ಸ್ಟೇ ಮತ್ತು ರೆಸಾರ್ಟ್ ಗಳಿಗೆ ಬುಕಿಂಗ್ ಮಾಡಿದವರ ಪ್ರವೇಶಕ್ಕೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.