ಬೆಂಗಳೂರು: ಮಲೆನಾಡು ಜನತೆಯ ಬಹುದಿನಗಳ ಬೇಡಿಕೆಯಾದ ಸಾಂಬಾರ್(ಸ್ಪೈಸ್) ಪಾರ್ಕ್ ಸದ್ಯದಲ್ಲೇ ತಲೆ ಎತ್ತಲಿದ್ದು, ದಶಕಗಳ ಕನಸು ಕೊನೆಗೂ ನನಸಾಗುವ ದಿನ ಸಮೀಪಿಸಿದೆ.
ಶುಕ್ರವಾರ ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಉದ್ಯೋಗ ಮಿತ್ರದಲ್ಲಿ ಕೇಂದ್ರ ಕೃಷಿ ಮತ್ತು ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಹೊಸಕೋಟೆ ಸಮೀಪದ ಅಂಬಾಲಿ ಗ್ರಾಮದಲ್ಲಿ ಸುಮಾರು 10 ಎಕರೆ ಜಮೀನಿನಲ್ಲಿ ಸಾಂಬಾರು ಪಾರ್ಕ್ ನಿರ್ಮಿಸಲು ಸಭೆ ಒಮ್ಮತದ ತೀರ್ಮಾನವನ್ನು ಕೈಗೊಂಡಿದೆ.
ಕರ್ನಾಟಕ ಕೈಗಾರಿಕಾ ಪ್ರವೇಶಾಭಿವೃದ್ಧಿ ನಿಗಮ(ಕೆಐಎಡಿಬಿ)ವು 20,35,665 ರೂ. ಆರ್ಥಿಕ ನೆರವು ನೀಡಲಿದ್ದು, 10 ಎಕರೆ ಜಮೀನಿನಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಚಿಕ್ಕಮಗಳೂರಿನಲ್ಲಿ ಸಾಂಬಾರು ಪಾರ್ಕ್ ನಿರ್ಮಾಣವಾಗಬೇಕೆಂಬುದು ದಶಕಗಳ ಬೇಡಿಕೆಯಾಗಿತ್ತು. ಅದು ಒಂದಿಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಇತ್ತು.
ಇತ್ತೀಚೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಜೊತೆ ಶೋಭಾ ಕರಂದ್ಲಾಜೆ ಅವರು ಮಾತುಕತೆ ನಡೆಸಿದ್ದರು. ಜೊತೆಗೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಿಗೆ ಜಮೀನಿನ ಮಾರುಕಟ್ಟೆಯ ದರದಂತೆ ಜಾಗದ 20,35,665 ರೂ. ಪಾವತಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ನಿರಾಣಿ ಚಿಕ್ಕಮಗಳೂರಿನ ಸೂಕ್ತ ಸ್ಥಳದಲ್ಲಿ ಕೆಐಎಡಿಬಿಯಿಂದ ಜಾಗ ಗುರುತಿಸುವಂತೆ ಸೂಚನೆ ನೀಡಿದ್ದರು.
ಘಟಕ ಸ್ಥಾಪನೆ:
ರಾಜ್ಯದಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ವಿಶೇಷ ಘಟಕ ಸ್ಥಾಪನೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಶೋಭಾ ಕರಂದ್ಲಾಜೆ ಅವರ ಮುಂದಿಟ್ಟರು.
ಇದಕ್ಕೆ ತಕ್ಷಣವೇ ಸ್ಪಂದಿಸಿದ ಮುರುಗೇಶ್ ನಿರಾಣಿ ಅವರು ಶೀಘ್ರದಲ್ಲೇ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ವತಿಯಿಂದ ವಿಶೇಷ ಘಟಕವನ್ನು ಆರಂಭಿಸಲಾಗುವುದು. ರೈತರಿಗೆ ಅನುಕೂಲವಾಗಲು ಯಾವುದೇ ಕ್ರಮ ಕೈಗೊಳ್ಳಲು ಸಿದ್ದವಿರುವುದಾಗಿ ಪ್ರಕಟಿಸಿದರು.
ಪರಿಹಾರ ಹೆಚ್ಚಳಕ್ಕೆ ಕ್ರಮ:
ಇದೇ ಸಂದರ್ಭದಲ್ಲಿ ಮುರುಗೇಶ್ ನಿರಾಣಿ ಅವರು, ತಮ್ಮ ತವರು ಜಿಲ್ಲೆ ಬಾಗಲಕೋಟೆಯ ಜಮಖಂಡಿ ಉಪವಿಭಾಗದಲ್ಲಿ ಕೃಷ್ಣಾನದಿ ಪ್ರವಾಹದಿಂದ ಉಂಟಾಗಿರುವ ಸವಕಳಿ – ಜವಕಳಿ ಮಣ್ಣಿನ ಕುಸಿದ ಬಗ್ಗೆ ಸಚಿವರ ಗಮನ ಸೆಳೆದರು.
ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಬಂದರೆ ಕೃಷ್ಣಾ ನದಿ ಉಕ್ಕಿ ಹರಿದು ಜಮಖಂಡಿ ಉಪ ವಿಭಾಗದಲ್ಲಿ ಪ್ರವಾಹ ಉಂಟಾಗುತ್ತದೆ. ಇದರಿಂದ ರೈತರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಹೋಗಿ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಮನವರಿಕೆ ಮಾಡಿದರು.
ಅತಿವೃಷ್ಟಿ ಮತ್ತು ಪ್ರವಾಹ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ಆಗಬಹುದಾದ ಕೊರಕಲು, ಭೂ ಸವಕಳಿಯಂತಹ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಹೊಲ ಸಮತಟ್ಟು ಉಳಿಸಲು ರೈತರಿಗೆ ಕೇಂದ್ರದಿಂದ ಅಗತ್ಯ ಪರಿಹಾರ ಒದಗಿಸಲು ಎನ್.ಡಿ.ಆರ್.ಎಫ್. ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.
ಸರ್ಕಾರ ನೀಡುತ್ತಿರುವ ಪರಿಹಾರವು ರೈತರಿಗೆ ಸಾಕಾಗುತ್ತಿಲ್ಲ. ಇದೊಂದು ಶಾಶ್ವತ ಸಮಸ್ಯೆಯಾಗಿರುವುದರಿಂದ ಕೇಂದ್ರ ಸರ್ಕಾರ ಈಗಿರುವ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇದಕ್ಕೆ ಸ್ಪಂದಿಸಿದ ಶೋಭಾ ಕರಂದ್ಲಾಜೆ ಅವರು ಈ ಸಂಬಂಧ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಜೊತೆ ಚರ್ಚಿಸಿ ರೈತರಿಗೆ ಪರಿಹಾರ ಹೆಚ್ಚಳ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದರು.
ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.