ಚಿಕ್ಕಮಗಳೂರು: ರಾಜ್ಯದಲ್ಲಿ ಒಂದೆಡೆ ಭೀಕರ ಬರಗಾಲ, ಕುಡಿಯುವ ನೀರಿಗೂ ಹಾಹಾಕಾರದ ಜೊತೆಗೆ ಸುಡು ಬಿಸಿಲಿನ ಝಳಕ್ಕೆ ಜನರು ಬಸವಳಿದು ಹೋಗುತ್ತಿದ್ದಾರೆ. ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಸಿಗಾಳಿಗೆ ಉಸಿರಾಡುವುದು ಕಷ್ಟಸಾಧ್ಯವಾಗುತ್ತಿದೆ. ಈ ನಡುವೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾದ ಕಾವಲಿನಂತಾದ ಭೂಮಿಗೆ ವರುಣ ತಂಪೆರೆದಿದ್ದಾನೆ.
ಚಿಕ್ಕಮಗಳೂರಿನಲ್ಲಿ ವರ್ಷದ ಮೊದಲ ಮಳೆಯಾಗುತ್ತಿದ್ದು, ಕಳೆದೊಂದು ಗಂಟೆಯಿಂದ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಜಿಲ್ಲೆಯ ಮುತ್ತೋಡಿ, ಕೊಳಗಾಮೆ, ಮೇಲಿನಹುಲುವತ್ತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ 20-30-40 ಸೆನ್ಸ್ ನಷ್ಟು ಮಳೆಯಾಗಿದೆ. ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.