ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಳಿಯ ಚಾರ್ಮಾಡಿ ಘಾಟ್‌ನ ಏಳನೇ ತಿರುವಿನಲ್ಲಿ ಒಂಟಿ ಸಲಗ ರಸ್ತೆ ಬದಿ ನಿಂತು ವಾಹನ ಸವಾರರಿಗೆ ಭಯ ಹುಟ್ಟಿಸಿತು. ಈ ವೇಳೆ ಮಂಗಳೂರು -ಹಾಸನ ಸರಕಾರಿ ಬಸ್ ಸ್ವಲ್ಪದರಲ್ಲೇ ಪಾರಾಗಿದೆ.
ಆನೆಯನ್ನು ಕಂಡ ಚಾಲಕ ತಕ್ಷಣ ಬಸ್ ನಿಲ್ಲಿಸಿದ್ದು, ರಸ್ತೆ ಬದಿಯ ಮರದ ಬಳಿ ವಿಶ್ರಾಂತಿ ಪಡೆಯುತ್ತಿದ್ದ ಆನೆ ಸ್ವಲ್ಪ ಸಮಯದ ನಂತರ ಏಳನೇ ತಿರುವಿನ ಇನ್ನೊಂದು ಬದಿಗೆ ಹೋಗಿ ನಿಂತಿತು. ಈ ವೇಳೆ ಟ್ರಾಫಿಕ್ ಜಾಮ್ ನಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಅರ್ಧ ಗಂಟೆಗೂ ಹೆಚ್ಚು ಕಾಲ ಬಸ್ ಹಿಂದೆ ಹಲವು ವಾಹನಗಳು ಸಾಲುಗಟ್ಟಿ ನಿಂತು ಒಂದೊಂದೇ ವಾಹನಗಳು ನಿಧಾನವಾಗಿ ಸಾಗಿದವು. ಕಾಡಾನೆ ಬಸ್ ಇದ್ದ ಸ್ಥಳದಿಂದ ಸ್ವಲ್ಪ ದೂರ ಸಾಗಿದ ನಂತರ ಪ್ರಯಾಣಿಕರೆಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ನಂತರ ಸಾರ್ವಜನಿಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.