
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಕಂಡು ಬಂದ ಹಿನ್ನಲೆಯಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ, ಜಯಣ್ಣ ಸೇರಿದಂತೆ ಮೂವರ ವಿರುದ್ಧ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಕ್ಸಲ್ ಚಟುವಟಿಕೆ ಕಂಡು ಬಂದ ಬೆನ್ನಲ್ಲೇ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡೆಗುಂಡಿ, ಯಡಗುಂದಕ್ಕೆ ಮುಂಡಗಾರು ಲತಾ ತಂಡ ಭೇಟಿ ನೀಡಿದೆ. ಕಡೆಗುಂದಿ ಗ್ರಾಮದ ಮನೆಯೊಂದರಲ್ಲಿ ಮುಂಡಗಾರು ಲತಾ ತಂಡ ಊಟ ಮಾಡಿದೆ.
ಶಸ್ತ್ರಾಸ್ತ್ರಗಳೊಂದಿಗೆ ಮುಂಡಗಾರು ಲತಾ ತಂಡದ ನಕ್ಸಲರು ಭೇಟಿ ನೀಡಿದ್ದ ಮನೆಯಲ್ಲಿ ಮೂರು ಬಂದೂಕುಗಳು ಪತ್ತೆಯಾಗಿವೆ. ಕೊಪ್ಪ ತಾಲೂಕಿನ ಕಡೆಗುಂಡಿಯಲ್ಲಿ ಎನ್ಎನ್ಎಫ್ ಪೊಲೀಸರು ಶೋಧಕಾರ್ಯ ಕೈಗೊಂಡಿದ್ದಾರೆ. ಕಡೆಗುಂಡಿ ಗ್ರಾಮದ ಸುಬ್ಬೇಗೌಡರ ಮನೆಯಲ್ಲಿ ಮೂರು ಬಂದೂಕು ದೊರೆತಿದ್ದು, ನಕ್ಸಲರ ಭೇಟಿ ಮತ್ತು ಬಂದೂಕಿನ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮಟೆ, ಎಎನ್ಎಫ್ ಎಸ್ಪಿ ಜಿತೇಂದ್ರ ನೇತೃತ್ವದಲ್ಲಿ ಕಡೆಗುಂಡಿ ಗ್ರಾಮದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ನಕ್ಸಲ್ ತುಂಗಾ ತಂಡದ ನಾಯಕತ್ವವನ್ನು ಮುಂಡಗಾರು ಲತಾ ವಹಿಸಿಕೊಂಡಿದ್ದಾರೆ. ಮೋಸ್ಟ್ ವಾಂಟೆಡ್ ನಕ್ಸಲರ ಪಟ್ಟಿಯಲ್ಲಿ ಮುಂಡಗಾರು ಲತಾ ಮತ್ತು ಜಯಣ್ಣ ಅವರಿದ್ದಾರೆ.