ಚಿಕ್ಕಮಗಳೂರು: ಪೊಲೀಸ್ ಠಾಣೆಯಿಂದಲೇ ಆರೋಪಿ ಪರಾರಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಕಡ್ಲೆಮಕ್ಕಿಯ ನಿಜಾಮ್(26) ಪರಾರಿಯಾದ ಆರೋಪಿ ಎಂದು ಹೇಳಲಾಗಿದೆ. ವಾಡುಕೊಡಿಗೆ ಸಮೀಪ ಶನಿವಾರ ನಡೆದುಕೊಂಡು ಹೋಗುತ್ತಿದ್ದ 12 ವರ್ಷದ ಬಾಲಕಿಯನ್ನು ತನ್ನ ವಾಹನಕ್ಕೆ ಹತ್ತಿಸಿಕೊಂಡಿದ್ದ ನಿಜಾಮ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಂಡಿಹೊಳೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿ ಕಿರುಕುಳ ನೀಡಿದ್ದು, ಸ್ಥಳೀಯರು ಆರೋಪಿಯ ವಾಹನ ತಡೆದು ಬಾಲಕಿಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಿಜಾಮನನ್ನು ಬಾಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿ ಲಾಕಪ್ ನಲ್ಲಿ ಇಟ್ಟಿದ್ದರು. ಭಾನುವಾರ ಮಧ್ಯಾಹ್ನದ ಸಂದರ್ಭದಲ್ಲಿ ಲಾಕಪ್ ಚಿಲಕ ತೆಗೆದು ನಿಜಾಮ್ ಪರಾರಿಯಾಗಿದ್ದಾನೆ. ಮೀನು ವ್ಯಾಪಾರಿಯಾಗಿರುವ ನಿಜಾಮ್ ಅನೇಕ ಅಪರಾಧ ಚಟುವಟಿಕೆಗಳ ಹಿನ್ನೆಲೆಯುಳ್ಳವನಾಗಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆನ್ನಲಾಗಿದೆ.