ಚಿಕ್ಕಮಗಳೂರು: ವೈದ್ಯ ಪತಿ ಮಹಾಶಯನೊಬ್ಬ ಪತ್ನಿಯನ್ನು ಗೃಹಬಂಧನದಲ್ಲಿಟ್ಟು, ಚಿತ್ರಹಿಂಸೆ ನೀಡಿರುವ ಘಟನೆ ಚಿಕ್ಕಮಗಳೂರಿನ ದೋಣಿಕಣದಲ್ಲಿ ನಡೆದಿದೆ.
ವಿನುತಾ ರಾಣಿ (45) ಎಂಬ ಮಹಿಳೆಯನ್ನು ಗೃಹಬಂಧನದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೂತಾ ರಾಣಿಯನ್ನು 22 ವರ್ಷಗಳ ಹಿಂದೆ ಡಾ.ರವಿಕುಮಾರ್ ಎಂಬ ವೈದ್ಯನಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಎಂಬಿಬಿಎಸ್ ಓದುವ ಮಗ ಕೂಡ ಇದ್ದಾನೆ. ಸ್ವತಃ ವೃತ್ತಿಯಲ್ಲಿ ವೈದ್ಯನಾಗಿದ್ದರೂ ರವಿಕುಮಾರ್ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ.
ವಿನೂತಾಳನ್ನು ಕಳೆದ ನಲ್ಕು ವರ್ಷಗಳಿಂದ ಮನೆಯ ರೂಮಿನಲ್ಲಿ ಕೂಡಿಹಾಕಿ, ಬೀಗ ಹಾಕಿ ಹೋಗುತ್ತಿದ್ದ. ನಾಲ್ಕೈದು ದಿನಗಳ ಕಾಲ ಅನ್ನ-ಆಹಾರವನ್ನೂ ನೀಡುತ್ತಿರಲಿಲ್ಲವಂತೆ. ಸಾಲದ್ದಕ್ಕೆ ಕೈ ಹಾಗೂ ಕಾಲಿನ ಮೇಲೆ ಬಿಸಿನೀರು ಎರಚಿ ವಿಕ್ರಿತಿ ಮೆರೆಯುತ್ತಿದ್ದನಂತೆ. ಪ್ರಶ್ನೆ ಮಾಡಿದರೆ ಡೈವರ್ಸ್ ಕೊಡುತ್ತೇನೆ ಎಂದು ಬೆದರಿಸಿ ಹಿಂಸಿಸುತ್ತಿದ್ದನಂತೆ. ವಿನೂತಾ ಅವರ ತವರು ಮನೆಯವರು ಮನೆ ಬಳಿ ಬರಲು ಹಾಗೂ ತವರು ಮನೆಯವರೊಂದಿಗೆ ಮಾತನಾಡಲು ಅವಕಾಶ ನೀಡುತ್ತಿರಲಿವಂತೆ. ಮಹಿಳೆಯ ಕೈಕಾಲುಗಳಿಗೆ ಬಿಸಿನೀರಿನಿಂದ ಸುಟ್ಟ ಗಾಯಗಳಾಗಿದ್ದು, ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ.
ವಿನುತಾ ಮನೆಯ ಮಹಡಿ ಮೇಲಿನ ರೂಮಿನಲ್ಲಿಯೇ ಇರಬೇಕು ಕೆಳಗೆ ಇಳಿಯಲು, ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ. ಸಾಲದ್ದಕ್ಕೆ ಕೊಡುವ ಊಟದಲ್ಲೂ ಸ್ಲೋ ಪಾಯಿಸನ್ ಹಾಕಿ ನೀಡುತ್ತಿದ್ದನಂತೆ. ಡಾ.ರವಿಕುಮಾರ್ ಮಾತ್ರವಲ್ಲಿ ಆಗಾಗ ಮನೆಗೆ ಬರುವ ಆತನ ತಾಯಿಯೂ ಹಿಂಸೆ ನೀಡುತ್ತಿದ್ದರಂತೆ. ಎಂಬಿಬಿಎಸ್ ಓದುತ್ತಿದ್ದ ಮಗ ಇದ್ದರೂ ತಾಯಿಗೆ ಕೊಡುವ ಚಿತ್ರಹಿಂಸೆಗೆ ಮೂಕ ಪ್ರೇಕ್ಷಕನಾಗಿದ್ದಾನೆ ಎನ್ನಲಾಗಿದೆ.
ವಿನೂತಾ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಸದ್ಯ ಪೊಲೀಸರು ಮಹಿಳೆಯನ್ನು ಗೃಹಬಂಧನದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ವೈದ್ಯ ರವಿಕುಮಾರ್ ನಾಪತ್ತೆಯಾಗಿದ್ದಾನೆ.